ನ್ಯೂಸ್

ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಇನ್ನಿಲ್ಲ: ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತ, ಕುಸಿದು ಬಿದ್ದು ಸಾವು

ಬೆಂಗಳೂರು: ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಇಂದು ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಡಾ. ಭುಜಂಗ ಶೆಟ್ಟಿ ಅವರು ಮನೆಗೆ ತೆರಳಿದ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು.

ಎಂದಿನಂತೆ ಕರ್ತವ್ಯಕ್ಕೆ‌ ಹಾಜರಾಗಿ ರೋಗಿಗಳ ತಪಾಸಣೆ ಮಾಡಿದ ಡಾ. ಭುಜಂಗ ಶೆಟ್ಟಿ, ಸಂಜೆ ಮನೆಗೆ ಹೋಗಿ ಮನೆಯಲ್ಲಿ ಜಿಮ್​ನಲ್ಲಿ ವ್ಯಾಯಾಮ ಮಾಡಿದ್ದರು. ಆಗ ಅವರು ಹೃದಯಾಘಾತಕ್ಕೆ ಒಳಗಾಗಿ, ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಆಸ್ಪತ್ರೆಗೆ ಕರೆತರುವ ವೇಳೆ ಹೃದಯ ಬಡಿತ ನಿಂತು ಹೋಗಿದ್ದು, ಆಸ್ಪತ್ರೆಯಲ್ಲಿ ಸಿಪಿಆರ್​​ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಸದ್ಯ ಮೃತದೇಹ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ದರ್ಶನ: ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದಲ್ಲಿ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಂಡು ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸುವ ಮೂಲಕ ಮಧುಮೇಹವನ್ನು ಸಂಪೂರ್ಣವಾಗಿ ಡಾ.ಭುಜಂಗಶೆಟ್ಟಿ ಅವರು ಗೆದ್ದಿದ್ದರು. ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಳ್ಳುವಂತೆ ಅನೇಕರಿಗೆ ಅವರು ಸಲಹೆ ನೀಡಿದ್ದರು.