ನ್ಯೂಸ್

Weekend with Ramesh; ಸಾಧಕರ ಕುರ್ಚಿ ಏರಲಿದ್ದಾರಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌!

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ವಿಕೇಂಡ್​ ವಿತ್​ ರಮೇಶ್​​ ಕಾರ್ಯಕ್ರಮವು ಜನಮನ್ನಣೆಯನ್ನು ಪಡೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸ್ಟಾರ್​​ ನಟ-ನಟಿಯರು, ರಾಜಕಾರಣಿಗಳು, ಉದ್ಯಮಿಗಳು, ರಂಗಭೂಮಿ ಕಲಾವಿಧರು ಹೀಗೆ ಹಲವು ಸಾಧಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಾಧನೆ ಮಾಡುವ ಮೂಲಕವಾಗಿ ಸಮಾಜವೇ ಒಮ್ಮೆ ಇವರ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸಾಧಕರನ್ನು ಗುರುತಿಸುವ ಕೆಲಸವನ್ನು ಈ ಕಾರ್ಯಕ್ರಮ ಮಾಡುತ್ತಿದೆ. ಈಗಾಗಲೇ ನೂರಾರು ಸಾಧಕರ ವೈಯಕ್ತಿಕ ಜೀವನ ಹಾಗೂ ಅವರು ನಡೆದು ಬಂದ ಹಾದಿಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ ಕಾರ್ಯಕ್ರಮ ಇದಾಗಿದೆ.

ಸೀಸನ್‌ 5ರಲ್ಲಿ ಮೋಹಕ ತಾರೆ ರಮ್ಯಾ ಅವರಿಂದ ಆರಂಭವಾದ ಈ ಶೋಗೆ ಇದೀಗ ಈ ವಾರ ಟ್ರಬಲ್‌ ಶೂಟರ್‌, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸಾಧಕರ ಕುರ್ಚಿಯಲ್ಲಿ ಆಸಿನರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತಾಗಿ ಸಖತ್​​ ಚರ್ಚೆಯಾಗುತ್ತದೆ.

ಈ ವಾರದ ಅತಿಥಿ ಯಾರೆಂಬುದನ್ನು ಜೀ ಕನ್ನಡದವರು ಇನ್ನೂ ಬಹಿರಂಗಗೊಳಿಸಿಲ್ಲ. ಸಾಮಾನ್ಯವಾಗಿ ಭಾನುವಾರದ ಎಪಿಸೋಡ್ ಮುಗಿದ ಎರಡೇ ದಿನಕ್ಕೆ ಅಂದರೆ ಮಂಗಳವಾರದಂದು ಮುಂದಿನ ವೀಕೆಂಡ್​ನ ಅತಿಥಿ ಯಾರೆಂಬ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾವುದೇ ಪ್ರೋಮೋ ಆಗಲಿ, ಹಂಚಿಕೊಂಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಈ ಬಾರಿ ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಘಟಾನುಘಟಿ ನಾಯಕನ ನೈಜ ಜೀವನ ವೀಕೆಂಡ್‌ ವಿಥ್‌ ರಮೇಶ್‌ ಶೋದಲ್ಲಿ ಅನಾವರಣಗೊಳ್ಳಲಿದೆ. ರಾಜಕೀಯ ಮಾತ್ರವಲ್ಲದೆ, ವೈಯಕ್ತಿಕ ಜೀವನ, ಉದ್ಯಮ, ಅನುಭವಿಸಿದ ಯಾತನೆ ಎಲ್ಲವನ್ನೂ ವೀಕೆಂಡ್‌ ಶೋದಲ್ಲಿ ಅನಾವರಣ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಆದರೆ ಕಾರ್ಯಕ್ರಮವನ್ನು ಪ್ರಸಾರಮಾಡುವ ಚಾನೆಲ್​ ಕಡೆಯಿಂದ ಡಿಕೆ ಶಿವಕುಮಾರ್ ಏಪಿಸೋಡ್‌ ಯಾವಾಗ ಶುರು? ನಿಜಕ್ಕೂ ಚಿತ್ರೀಕರಣವಾಗಿದ್ಯಾ? ಇದು ಗಾಳಿ ಸುದ್ದಿನಾ ಹೀಗೆ ಯಾವುದೇ ಅಧಿಕೃತವಾದ ಮಾಹಿತಿ ಇಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕು ಎಂದಾದರೆ ನಾವು ವೀಕೆಂಡ್‌ ಶೋ ಪ್ರಸಾರವಾಗುವವರೆಗೂ ಕಾಯುವುದು ಅವಶ್ಯಕವಾಗಿದೆ.