ಬೆಂಗಳೂರು: ಡಾಲಿ ಧನಂಜಯ ನಾಯಕನಾಗಿ ಅಭಿನಯಿಸಿರುವ 25ನೇ ಚಿತ್ರ ‘ಹೊಯ್ಸಳ’. ಆದರೆ, ಬಿಡುಗಡೆ ದಿನಾಂಕ ಹತ್ತಿರವಾದಂತೆಯೇ ಟೈಟಲ್ ಸಂಬಂಧ ಸಮಸ್ಯೆ ಉಂಟಾಗಿ ಚಿತ್ರತಂಡ ಶೀರ್ಷಿಕೆ ಬದಲಿಸಿದೆ. ಚಿತ್ರಕ್ಕೆ ಈಗ ‘ಗುರುದೇವ್ ಹೊಯ್ಸಳ’ ಎಂದು ಹೆಸರಿಡಲಾಗಿದ್ದು, ಚಿತ್ರ ಮಾರ್ಚ್ 30ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ‘ಗುರುದೇವ್ ಹೊಯ್ಸಳ’ ಪಾತ್ರದಲ್ಲಿ ಡಾಲಿ ಧನಂಜಯ ನಟಿಸಿದ್ದು, ಅವರಿಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದಾರೆ.
ಹೊಸ ಟೈಟಲ್ ಕುರಿತು ಇತ್ತೀಚೆಗಷ್ಟೆ ಮಾತನಾಡಿದ ನಟ ಧನಂಜಯ, ‘ಹಲವು ವರ್ಷಗಳಿಂದ ‘ಹೊಯ್ಸಳ’ ಟೈಟಲ್ ನಿರ್ವಪಕ ರಾಮು ಅವರ ಬಳಿಯಿತ್ತು. ಮಾಲಾಶ್ರೀ ಮೇಡಂ ಹತ್ತಿರ ಕೇಳಿ ಆ ಟೈಟಲ್ ಪಡೆದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಾಯಿಸಿ, ನಂತರ ಸಿನಿಮಾ ಘೋಷಣೆ ಮಾಡಿದೆವು. ಇದೀಗ ಬಿಡುಗಡೆ ಸಮಯದಲ್ಲಿ ಅದೇ ಹೆಸರಿನ ಮತ್ತೊಂದು ಸಿನಿಮಾ ಇರುವುದು ಗೊತ್ತಾಯಿತು. ಆ ಚಿತ್ರತಂಡದವರ ಹತ್ತಿರವೂ ಮಾತನಾಡಿದೆ. ಅವರು ಕಳೆದ ವರ್ಷವೇ ಸಿನಿಮಾ ಮುಗಿಸಿ, ಸೆನ್ಸಾರ್ ಮಾಡಿಸಿದ್ದಾರೆ. ಬೇರೆ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದೆವು ಅಂತಂದರು. ಮೂರು, ನಾಲ್ಕು ವಾಣಿಜ್ಯ ಮಂಡಳಿಗಳಿವೆ, ಅವರು ಕುಳಿತು ಮಾತನಾಡಿಕೊಂಡು ಬಗೆಹರಿಸಬೇಕು. ಸದ್ಯ ನಾವು ‘ಗುರುದೇವ್ ಹೊಯ್ಸಳ’ ಅಂತ ಟೈಟಲ್ ಬದಲಿಸಿ, ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಶೀರ್ಷಿಕೆ ಸಮಸ್ಯೆ ಕುರಿತು ಮಾಹಿತಿ ಹಂಚಿಕೊಂಡರು.
ಇನ್ನು ನಾಯಕನಾಗಿ ಮಾತ್ರವಲ್ಲದೇ ಖಳನಾಯಕನಾಗಿಯೂ ನಟಿಸುತ್ತಿರುವ ಕಾರಣ, ಡಾಲಿ ಧನಂಜಯ ಮೇಲೆ ಜವಾಬ್ದಾರಿ ಹೆಚ್ಚು. ‘ವಿಲನ್ ಆಗಿಯೂ ನಟಿಸುವ ಕಾರಣ, ಸಮಾಜಕ್ಕೆ ಏನು ಹೇಳುತ್ತೀಯಾ ಎಂಬ ಪ್ರಶ್ನೆ ನನ್ನಲ್ಲಿ ಹೆಚ್ಚು ಮೂಡುತ್ತಿರುತ್ತದೆ. ಅದೇ ಕಾರಣಕ್ಕೆ ‘ಬಡವ ರಾಸ್ಕಲ್’, ‘ರತ್ನನ್ ಪ್ರಪಂಚ’ ಚಿತ್ರಗಳಲ್ಲಿ ಕೌಟುಂಬಿಕ ಮೌಲ್ಯದ ವಿಷಯಗಳನ್ನು ಹೇಳಿದ್ದೇನೆ. ನಮ್ಮ ಸುತ್ತಮುತ್ತ ನಡೆದಿರುವ ಎಷ್ಟೋ ಸೂಕ್ಷ್ಮ ಮತ್ತು ಗಂಭೀರವಾದ ವಿಷಯವನ್ನಿಟ್ಟುಕೊಂಡು ಮಾಡಿರುವ ಕಮರ್ಷಿಯಲ್ ಚಿತ್ರ ‘ಗುರುದೇವ್ ಹೊಯ್ಸಳ’. ಡಾಲಿ, ಸೀನಾ, ರತ್ನಾಕರ, ಮಿಠಾಯಿ ಸೂರಿ, ಜಾಲಿ ರೆಡಿ ್ಡ.. ಹೀಗೆ ನನ್ನ ಪಾತ್ರಗಳದ್ದೇ ಒಂದು ಪ್ರಪಂಚ ಸೃಷ್ಟಿಯಾಗಿದೆ. ಆ ಸಾಲಿಗೆ ಹೊಸ ಸೇರ್ಪಡೆ ಗುರುದೇವ್ ಹೊಯ್ಸಳ’ ಎಂದು ಹೇಳಿಕೊಳ್ಳುತ್ತಾರೆ ಧನಂಜಯ.