ನ್ಯೂಸ್

ನಿಮ್ಮ ಕಣ್ಣಿಗೆ ನಾನು, ಸುದೀಪ್, ಶಿವಣ್ಣ, ಯಶ್ ಮಾತ್ರ ಕಾಣೋದಾ? ನಟ ದರ್ಶನ್ ಅಸಮಾಧಾನ​

ಮೈಸೂರು: ಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರು ಕಾವುದಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ನಟ ದರ್ಶನ್​, ಕಲಾವಿದರ ಪರ ಬ್ಯಾಟ್​ ಬೀಸಿದ್ದಾರೆ.

ನಿನ್ನೆ (ಸೆ.24) ಬನ್ನೂರಿನಲ್ಲಿ ಗಂಗಾ ಸೇನಾ ಮತ್ತು ಕರ್ನಾಟಕ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ 100 ಹಳ್ಳಿಕಾರ್ ಹಸುಗಳ ಗೋದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಟ ದರ್ಶನ್ ಮಾತನಾಡಿದರು.

ಕಾವೇರಿ ಹೋರಾಟದ ಬಗ್ಗೆ‌ ಮೌನ ಮುರಿದ ನಟ ದರ್ಶನ್, ಕಳೆದ ಕೆಲವು ದಿನಗಳಿಂದ ಕಲಾವಿದರು ಹೋರಾಟಕ್ಕೆ ಬರಲಿಲ್ಲ ಅಂತಿದ್ದಾರೆ. ಆದರೆ, ಮೊನ್ನೆ ಮೊನ್ನೆ ತಮಿಳು ಸಿನಿಮಾವೊಂದು ಬಿಡುಗಡೆ ಆಯ್ತು. ವಿತರಕರೊಬ್ಬರು‌ 6 ಕೋಟಿ ರೂಪಾಯಿಗೆ ಸಿನಿಮಾ ತೆಗೆದುಕೊಂಡರು. ಕರ್ನಾಟಕದಿಂದ 36 ಕೋಟಿ ರೂ. ದುಡ್ಡು ತಮಿಳುನಾಡಿಗೆ ಹೋಯ್ತಲ್ಲ ಅದರ ಬಗ್ಗೆ ಯಾರೊಬ್ಬರು ಕೇಳಲಿಲ್ಲ ಎಂದು ವಿವಿಧ ಸಂಘಟನೆಗಳನ್ನು ದರ್ಶನ್​ ಪ್ರಶ್ನೆ ಮಾಡಿದರು.

ಮುಂದುವರಿದು ಮಾತನಾಡಿದ ದರ್ಶನ್, ನಿಮ್ಮ ಕಣ್ಣಿಗೆ ನಾನು, ಸುದೀಪ್, ಶಿವಣ್ಣ, ಯಶ್ ಹಾಗೂ ಅಭಿ ಮಾತ್ರ ಕಾಣೋದಾ? ಯಾಕೆ ಅವರ್ಯಾರು ನಿಮಗೆ ಕಾಣಲಿಲ್ವಾ? 36 ಕೋಟಿ ರೂಪಾಯಿಯನ್ನು ನಮ್ಮ ಕನ್ನಡದಿಂದ ತೆಗೆದುಕೊಂಡು ಹೋಗಿದ್ದಾರೆ ಸ್ವಾಮಿ, ಇವತ್ತು ನಾವು ಗುದ್ದಾಡ್ತಿರುವುದು ಯಾವುದಕ್ಕೆ? ಇದನೆಲ್ಲ ನೋಡಿ ಎಲ್ಲ ಸೈಲೆಂಟ್ ಆದ್ರಿ. ಆದರೆ, ನಾನು ಮಾತನಾಡಿದ್ರೆ ಜೋರಾಗಿರುತ್ತೆ ಮತ್ತು ಕೆಟ್ಟದಾಗಿರುತ್ತೆ ಅಲ್ವಾ? ಎನ್ನವ ಮೂಲಕ ದರ್ಶನ್​ ಅಸಮಾಧಾನ ಹೊರಹಾಕಿದರು.

ಅಂದಹಾಗೆ ಕಾವೇರಿ ವಿಚಾರವಾಗಿ ಸ್ಯಾಂಡಲ್​ವುಡ್​ನಲ್ಲಿ ಮೊದಲು ಧ್ವನಿಯೆತ್ತಿದ್ದೇ ನಟ ದರ್ಶನ್​. ಸೆ.20ರಂದು ಟ್ವೀಟ್​ ಮಾಡಿದ ದರ್ಶನ್​, ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದಿದ್ದಾರೆ.