More

    ಅಂತಾರಾಷ್ಟ್ರೀಯ ಕ್ರೀಡಾಂಗಣ -ಸಚಿವದ್ವಯರಿಗೆ ಶೀಘ್ರ ಮನವರಿಕೆ -ದಸರಾ ಕ್ರೀಡಾಕೂಟದಲ್ಲಿ ಶಾಸಕ ಬಸವಂತಪ್ಪ ಹೇಳಿಕೆ 

    ದಾವಣಗೆರೆ: ದಾವಣಗೆರೆ ನಗರದಲ್ಲಿ 100- 200 ಎಕರೆಯ ಬೃಹತ್ ಜಾಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗಬೇಕಿದೆ. ಈ ಸಂಬಂಧ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಮನವಿ ಮಾಡುವುದಾಗಿ ಕೆ.ಎಸ್.ಬಸವಂತಪ್ಪ ಹೇಳಿದರು.
    ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ, ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
    ಮಲ್ಲಿಕಾರ್ಜುನ ಅವರು ಹಿಂದೆ ಕ್ರೀಡಾ ಸಚಿವರಿದ್ದಾಗ ದಾವಣಗೆರೆಗೆ ಉತ್ತಮ ಕೊಡುಗೆ ನೀಡಿದ್ದರು. ಅಂತಾರಾಷ್ಟ್ರೀಯ ಈಜುಕೊಳ, ಬಾಸ್ಕೆಟ್‌ಬಾಲ್ ಅಂಕಣ ಇನ್ನಿತರೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾದವು. ಈಗ ಅವರೇ ಸಚಿವರಿದ್ದಾರೆ. ದಾವಣಗೆರೆ ಜಿಲ್ಲೆ ಕ್ರೀಡೆಯಲ್ಲಿ ಅಗ್ರ ಸ್ಥಾನ ಪಡೆಯುವಂತಾಗಬೇಕು. ಈ ದಿಸೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗಲಿ ಎಂದು ಆಶಿಸಿದರು.
    ತೋಳಹುಣಸೆಯ ಯುವತಿಯೊಬ್ಬರು ಕಬಡ್ಡಿ ಕ್ರೀಡಾಪಟುವಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದಾರೆ. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಕೂಡ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕೇವಲ ಆಟ ಒಂದರಿಂದಲೇ ಪ್ರಗತಿ ಸಾಧ್ಯವಿಲ್ಲ. ಶಿಕ್ಷಣದತ್ತಲೂ ಗಮನ ನೀಡಬೇಕು ಎಂದು ಹೇಳಿದರು.
    ಕ್ರೀಡಾಕೂಟದಲ್ಲಿ ತೀರ್ಪುಗಾರರು ಪ್ರಾಮಾಣಿಕ ತೀರ್ಪು ನೀಡಬೇಕು. ಪಕ್ಷಪಾತ ಮಾಡದೆ ನೈಜ ಕ್ರೀಡಾಪಟುಗಳನ್ನು ಗುರುತಿಸಬೇಕು ಎಂದ ಅವರು, ಇಂದು ಎಲ್ಲೆಡೆ ಬರದ ಸನ್ನಿವೇಶವಿದೆ. ಹೀಗಾಗಿ ದಸರಾ ಕ್ರೀಡಾಕೂಟಗಳನ್ನು ಸರಳವಾಗಿ ಆಚರಿಸಲು ಸರ್ಕಾರ ಸೂಚನೆ ನೀಡಿದೆ ಎಂದರು.
    ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಹರಿಹರ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಕ್ರೀಡಾಂಗಣ ಇನ್ನಷ್ಟು ಸುಂದರವಾಗಬೇಕು. ಕ್ರಿಡಾಪಟುಗಳಿಗೆ ಇಲ್ಲಿ ಹೆಚ್ಚಿನ ಉತ್ತೇಜನ ಸಿಗಬೇಕು ಎಂದು ಆಶಿಸಿದರು.
    ಕ್ರೀಡಾಪಟುಗಳು ಕೇವಲ ತಾಲೂಕು, ಜಿಲ್ಲೆಗಳಿಗೆ ಸೀಮಿತರಾಗದೆ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಬೇಕು. ದಾಖಲೆ ಮಾಡಬೇಕು. ಆಗ ಕ್ರೀಡಾ ಕ್ಷೇತ್ರದಲ್ಲಿ ಸಾಧಕರಾಗಿ ಹೊರಹೊಮ್ಮಬಹುದು ಎಂದು ಕಿವಿಮಾತು ಹೇಳಿದರು.
    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್. ಜಯಲಕ್ಷ್ಮೀಬಾಯಿ, ಖೋಖೋ ತರಬೇತುದಾರ ಜೆ.ರಾಮಲಿಂಗಪ್ಪ ಇತರರಿದ್ದರು.
    ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 1200 ಯುವಕ-ಯುವತಿಯರು ಭಾಗವಹಿಸಿದ್ದು, ಅಥ್ಲೆಟಿಕ್ಸ್ ಹಾಗೂ 18 ವಿಧದ ಗುಂಪು ಕ್ರೀಡೆಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts