ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಮಂಗಳವಾರ ಡ್ಯಾನ್ಸಿಂಗ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಕಾರಿನ ಮಾಲಿಕನಿಗೆ 41,500 ರೂಪಾಯಿ ದಂಡವನ್ನು ವಿಧಿಸಿದ್ದಾರೆ.
ಕೆಲವು ಮಂದಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ಸ್ಥಳೀಯರು ನೀಡಿದ ದೂರು ಸ್ವೀಕರಿಸಿದ ಬಳಿಕ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಕಾರಿನ ಮಾಲಿಕನನ್ನು ನಸುಮ್ ಅಹ್ಮದ್ ಎಂದು ಗುರುತಿಸಲಾಗಿದೆ. ರಸ್ತೆಯಲ್ಲೇ ತನ್ನ ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಸಾಗುತ್ತಿದ್ದ. ವಿಶೇಷವಾಗಿ ತನ್ನ ಕಾರನ್ನು ಡ್ಯಾನ್ಸಿಂಗ್ ಕಾರಿನ ರೀತಿ ಮಾರ್ಪಾಡು ಮಾಡಿಕೊಂಡು ಜೋರಾದ ಮ್ಯೂಸಿಕ್ ಹಾಕಿಕೊಂಡು ಅಕ್ಕಪಕ್ಕದವರಿಗೆ ತೊಂದರೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಂದಹಾಗೆ ಎಸ್ಯುವಿ ಕಾರಿನ ಮಾಲಿಕ ದೆಹಲಿಯ ನಿವಾಸಿ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು ವಾಹನವನ್ನು ಸೀಜ್ ಮಾಡಲಾಗಿದ್ದು, ದಂಡವನ್ನು ವಿಧಿಸಲಾಗಿದೆ. ಯಾರಾದರೂ ವಾಹನವನ್ನು ಸ್ಟಿಕರ್ಗಳ ಮೂಲಕ ಮಾರ್ಪಾಡು ಮಾಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)