

ನವದೆಹಲಿ: ಕೆಲವರು ಸೀನುವುದನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಆದರೆ, ತಮಾಷೆಗೂ ಸೀನುವುದನ್ನು ತಡೆಯಲು ಪ್ರಯತ್ನಿಸಬಾರದು ಎಂದು ವೈದ್ಯಕೀಯ ಪರಿಣಿತರು ಎಚ್ಚರಿಸಿದ್ದಾರೆ. ಸೀನುವಾಗ ನಮಗೆ ಗೊತ್ತಿಲ್ಲದಂತೆ ಕಣ್ಣನ್ನು ಮುಚ್ಚುತ್ತೇವೆ. ಅಲ್ಲದೆ, ಹೃದಯ ಕೂಡ ಮಿಲಿಸೆಕೆಂಡ್ಗಳ ಕಾಲ ಸೀನುವಾಗ ಸ್ತಬ್ಧವಾಗುತ್ತದೆಯಂತೆ.
ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಯಾವುದೇ ವಿಷಮ ಪರಿಸ್ಥಿತಿಯಲ್ಲು ಸೀನುವುದನ್ನು ತಡೆಯಬಾರದು. ಅದರಲ್ಲೂ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. 34 ವರ್ಷದ ವ್ಯಕ್ತಿಯೊಬ್ಬ ಕಣ್ಣು ಬಿಟ್ಟುಕೊಂಡು ಸೀನಿದರೆ ಏನಾಗುತ್ತದೆ ಎಂದು ತಿಳಿಯುವ ಕುತೂಹಲದಿಂದ ಬೇಕೆಂತಲೇ ಕಣ್ಣುಬಿಟ್ಟು ಸೀನಿದವನ ಪರಿಸ್ಥಿತಿ ಇಂದು ಹೀನಾಯವಾಗಿದೆ.
ಸಾಮಾನ್ಯವಾಗಿ ಸೀನುವಾಗ ಮೂಗು ಮತ್ತು ಬಾಯನ್ನು ಸಡಿಲವಾಗಿ ಮುಚ್ಚಿಕೊಳ್ಳುತ್ತಾರೆ. ಕಣ್ಣು ಅದಾಗಿಯೇ ಮುಚ್ಚಿಕೊಳ್ಳುತ್ತದೆ. ಆದರೆ, ಕಣ್ಣು ಬಿಟ್ಟುಕೊಂಡು ಗಟ್ಟಿಯಾಗಿ ಮೂಗು ಮತ್ತು ಬಾಯಿ ಮುಚ್ಚಿಕೊಂಡು ಸೀನಿದವನ ಕತೆ ಏನಾಗಿದೆಯೆಂದರೆ, ಆತನ ಕುತ್ತಿಗೆಯ ಮೂಳೆಯೇ ಮುರಿದಿದೆ. ಎಲ್ಲವನ್ನು ಮುಚ್ಚಿಕೊಂಡು ಸೀನುವಾಗ ಕುತ್ತಿಗೆಯ ಭಾಗದಲ್ಲಿ ಮುರಿದ ಶಬ್ದದೊಂದಿಗೆ ನೋವು ಕಾಣಿಸಿಕೊಂಡಿದೆ. ಅಲ್ಲದೆ, ಊಟವನ್ನು ಜಗಿದು ನುಂಗುವುದು ಸಹ ಕಷ್ಟವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಾಗಿದ್ದು, ಎಕ್ಸ್ರೇ ತೆಗೆದು ನೋಡಿದಾಗ ಆತನ ಕುತ್ತಿಗೆಯ ಕೆಳಭಾಗ ಮುರಿದಿರುವುದು ಪತ್ತೆಯಾಗಿದೆ.
ಇನ್ನು ಸೀನುವಾಗ ದೊಡ್ಡ ಪ್ರಮಾಣದ ಗ್ಯಾಸ್ ಒತ್ತಡ ಇರುತ್ತದೆ. ಗಾಳಿ ಹೋಗುವ ಜಾಗ ಸಡಿಲವಾಗಿದ್ದರೆ ಮೂಗು ಮತ್ತು ಬಾಯಿಯ ಮೂಲಕ ಗ್ಯಾಸ್ ಹೊರ ಹೋಗುತ್ತದೆ. ಆದರೆ, ಅದೇ ಗ್ಯಾಸ್ ಹೊರ ಹೋಗಲು ಆಗದೇ ಹಿಮ್ಮುಖ ಒತ್ತಡ ಹೆಚ್ಚಾದರೆ ಕುತ್ತಿಗೆ ಮೂಳೆ ಮುರಿಯುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಅದೃಷ್ಟವಶಾತ್ ಸಂತ್ರಸ್ತ ವ್ಯಕ್ತಿಯ ಸ್ಥಿತಿ ಗಂಭೀರವಾಗಿಲ್ಲ. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಟ್ಯೂಬ್ ಮೂಲಕ ಆತನಿಗೆ ಆ್ಯಂಟಿಬಯಾಟಿಕ್ಸ್ ನೀಡಲಾಗುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಹ ಮಾಡಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ದುಸ್ಸಾಹಸಕ್ಕೆ ಕೈಹಾಕಬೇಡ ಎಂದು ವೈದ್ಯರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. (ಏಜೆನ್ಸೀಸ್)