ನ್ಯೂಸ್

Shootout| ಮನೆಗೆ ನುಗ್ಗಿ Dalit ಶಿಕ್ಷಕನ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ದಲಿತ (Dalit) ಶಿಕ್ಷಕ ದಂಪತಿ ಹಾಗೂ ಅವರ ಪುಟ್ಟ ಮಕ್ಕಳನ್ನು ದುಷ್ಕರ್ಮಿಗಳ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಅಮೇಠಿಯ ಅಹೋರ್ವ ಭವಾನಿ ಕ್ರಾಸಿಂಗ್​ನ ಮನೆಯೊಂದರಲ್ಲಿ ನಡೆದಿದೆ.

ಮೃತರನ್ನು ಸುನೀಲ್ (35) ಪೂನಮ್ (32) ದೃಷ್ಟಿ (6) ಹಾಗೂ ಒಂದು ವರ್ಷದ ಗಂಡು ಮಗು ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಯಿತು ಎಂಬುದು ಈವರೆಗೆ ತಿಳಿದು ಬಂದಿಲ್ಲ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ಸಿಂಗ್, ಗುರುವಾರ ರಾತ್ರಿ ಅವರ ಮನೆಯಿಂದ ಗುಂಡಿನ ಸದ್ದು ಕೇಳಿ ನೆರೆಹೊರೆಯವರು ಓಡಿ ಬಂದಾಗ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ದರೋಡೆ ಮಾಡಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಅಪರಾಧದ ಹಿಂದಿನ ಉದ್ದೇಶವು ಸ್ಪಷ್ಟವಾಗಿಲ್ಲ.

ಸುನಿಲ್‌ಗೆ ಸಂಬಂಧಿಸಿದ ಕಾನೂನು ವಿವಾದ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಕುಟುಂಬಕ್ಕೆ ಪರಿಚಿತರಾಗಿದ್ದವರೇ ಕೃತ್ಯ ಎಸಗಿರುವ ಅನುಮಾನ ಇದೆ. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ. ಇದಕ್ಕೂ ಮುನ್ನ ದಂಪತಿ ವ್ಯಕ್ತಿಯೊಬ್ಬರ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪದಡಿ ದೂರು ದಾಖಲಿಸಿದ್ದರು| ವಿಚಾರವಾಗಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ಸಿಂಗ್ ತಿಳಿಸಿದ್ಧಾರೆ.

ದಲಿತ ಕುಟುಂಬಕ್ಕೆ ಸೇರಿದ ರಾಯ್ ಬರೇಲಿ ಮೂಲದ ಸುನೀಲ್ ಅವರು ಕಳೆದ ತಿಂಗಳು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ರಾಯ್ ಬರೇಲಿಯ ಚಂದನ್ ವರ್ಮಾ ಎನ್ನುವರ ವಿರುದ್ಧ ದೂರು ದಾಖಲಿಸಿದ್ದರು. ನಮಗೇನಾದರೂ ತೊಂದರೆ ಆದರೆ ಚಂದನ್ ವರ್ಮಾನೇ ಹೊಣೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದು, ದಲಿತ ಕುಟುಂಬದ ಸಾವಿಗೆ ಸಂತಾಪ ಸೂಚಿಸಿದ್ದಾರೆ.