ನ್ಯೂಸ್

ಬೆಟ್ಟಿಂಗ್ ಆ್ಯಪ್ ಸುಳಿಗೆ ಈ ಪ್ರಖ್ಯಾತ ಕಂಪನಿಯೂ ಸಿಲುಕಿತಾ?: ದಾಖಲಾಯಿತು ಎಫ್​ಐಆರ್​!

ನವದೆಹಲಿ: ದೇಶದಲ್ಲಿ ಕೆಲವು ದಿನಗಳಿಂದ ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ ಸದ್ದು ಮಾಡುತ್ತಿದ್ದು, ಸಿನಿಮಾ ಸ್ಟಾರ್​ಗಳು ಸೇರಿದಂತೆ ಹಲವು ಗಣ್ಯರು ಈ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಪ್ರತಿಷ್ಠಿತ ಕಂಪನಿಯೊಂದು ಕೂಡ ಈ ಬೆಟ್ಟಿಂಗ್ ಆ್ಯಪ್ ಸುಳಿಗೆ ಸಿಲುಕಿದ್ದು, ಅದರ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.

ಡಾಬರ್ ಕಂಪನಿಯ ಚೇರ್ಮನ್ ಮೋಹಿತ್ ವಿ. ಬರ್ಮನ್ ಮತ್ತು ನಿರ್ದೇಶಕ ಗೌರವ್ ವಿ. ಬರ್ಮನ್ ವಿರುದ್ಧ ಮಹದೇವ ಬೆಟ್ಟಿಂಗ್​ ಆ್ಯಪ್ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದು, ಇವರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ. ಆದರೆ ಬರ್ಮನ್ ಕುಟುಂಬಸ್ಥರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಮುಂಬೈ ಪೊಲೀಸರು ದಾಖಲಿಸಿಕೊಂಡಿರುವ ಕೇಸ್​ನಲ್ಲಿ ಇರುವ 32 ಹೆಸರುಗಳ ಪೈಕಿ ಡಾಬರ್ ಕಂಪನಿಯ ಮೋಹಿತ್ ಮತ್ತು ಗೌರವ್ ಅವರ ಹೆಸರುಗಳೂ ಇವೆ ಎನ್ನಲಾಗಿದೆ.

ಆದರೆ, ನಮಗೆ ಅಂಥ ಎಫ್​ಐಆರ್ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಅಷ್ಟಕ್ಕೂ ಈ ಕೇಸ್ ದಾಖಲಾಗಿರುವುದು ಸತ್ಯವಾಗಿದ್ದರೆ, ಅದು ಷಡ್ಯಂತ್ರ ಎಂದು ಡಾಬರ್ ಕಂಪನಿಯ ವಕ್ತಾರರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ ಎಫ್​ಐಆರ್ ದಾಖಲಾಗಿದ್ದರೆ ನಮಗೆ ಕಾನೂನುವ್ಯವಸ್ಥೆಯಲ್ಲಿ ನಂಬಿಕೆ ಇದೆ, ಸತ್ಯ ಏನು ಎಂಬುವುದು ಕಾನೂನುಪ್ರಕ್ರಿಯೆಯಲ್ಲಿ ಬಹಿರಂಗಗೊಳ್ಳಲಿದೆ ಎಂದು ಹೇಳಿದ್ದಾರೆ.