ನ್ಯೂಸ್

ಉಡುಪಿ | ಉದ್ಯೋಗ ಸಿಗಲಿಲ್ಲವೆಂದು ಮನನೊಂದ ಯುವತಿ ಸಾವಿಗೆ ಶರಣು!

ಉಡುಪಿ: ಪದವಿ ಶಿಕ್ಷಣ ಮುಗಿದಿದ್ದರೂ, ಉದ್ಯೋಗ ಸಿಗಲಿಲ್ಲವೆಂದು ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೈಂದೂರಿನ ಕಾಲ್ನೋಡು ಗ್ರಾಮದ ಗೌತಮಿ(22) ಸಾವಿಗೆ ಶರಣಾದ ಯುವತಿ.

ಮೃತ ಯುವತಿ ಗೌತಮಿ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂ.ಕಾಂ ಪೂರ್ಣಗೊಳಿಸಿದ್ದಳು. ಬಳಿಕ ಬ್ಯಾಂಕಿಂಗ್ ಪರೀಕ್ಷೆ ಬರೆದಿದ್ದಾಳೆ. ಜತೆಗೆ ಕೆಲ ಕಂಪನಿಗಳ ಉದ್ಯೋಗ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ ಎಲ್ಲೂ ಉದ್ಯೋಗ ಸಿಕ್ಕಿರಲಿಲ್ಲ. ಇದರಿಂದಾಗಿ ಕೆಲ ಸಮಯದಿಂದ ಖಿನ್ನತೆಗೆ ಒಳಗಾಗಿದ್ದಳು.

ಇದೀಗ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಗೌತಮಿ ಡೆತ್​ನೋಟ್​ ಬರೆದಿಟ್ಟು, ಮನೆಯ ಮೊದಲ ಮಹಡಿಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದವಿ ವ್ಯಾಸಂಗ ಮುಗಿದರೂ ಸಿಗದ ಉದ್ಯೋಗ; ಮನನೊಂದು ಪ್ರಾಣಬಿಟ್ಟ ಯುವಕ

ಕಲಬುರಗಿ: ಪದವಿ ಮುಗಿಸಿದರೂ, ಉದ್ಯೋಗ ಸಿಗದ ಹಿನ್ನೆಲೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದುಪ್ರಸಾದ ಬಿರಾಳ.ಬಿ(26) ನೇಣಿಗೆ ಶರಣಾದ ಯುವಕ. ಈ ಘಟನೆ ಏಪ್ರಿಲ್ 22ರಂದು ನಡೆದಿದೆ. ಜೇವರ್ಗಿ ಪಟ್ಟಣದ ನ್ಯಾಯಾಲಯ ಮುಂದಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಸಿದ್ದುಪ್ರಸಾದ ಆತ್ಮಹತ್ಯೆಗೆ ಶರಣಾಗಿದ್ದ.

ಸಿದ್ದುಪ್ರಸಾದ ಬಿರಾಳ ಪದವಿ ಮುಗಿಸಿದ್ದ. ಆದರೆ ಸೂಕ್ತವಾದ ಉದ್ಯೋಗ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಸಿದ್ದು ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಬಳಿಕ ಪದವಿ ವ್ಯಾಸಾಂಗ ಮುಗಿದು ವರ್ಷ ಕಳೆದರೂ ಉದ್ಯೋಗ ಸಿಗದ ಹಿನ್ನೆಲೆ ನೇಣು ಹಾಕಿಕೊಂಡಿದ್ದ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.