ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸ್ ವಿಚಾರವಾಗಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಭವಾನಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದ್ದು, ಎಚ್ಡಿ ರೇವಣ್ಣ ಕುಟುಂಬಕ್ಕೆ ಇಂದು ಡಬಲ್ ಶಾಕ್ ಆಗಿದೆ.
ಮೈಸೂರಿನ ಕೆಆರ್ ಪೇಟೆಯಲ್ಲಿ ದಾಖಲಾಗಿರುವ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧನದ ಭೀತಿ ಎದುರಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಮೇ 31ರಂದು ತೀರ್ಪು ನೀಡುವುದಾಗಿ ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್ ಭವಾನಿ ರೇವಣ್ಣ ಅವರಿಗೆ ಜಾಮೀನು ತಿರಸ್ಕರಿಸಿದೆ.
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ನೀಡಿತ್ತು. ಆದರೆ, ಈ ನೊಟೀಸ್ಗೆ ಭವಾನಿ ರೇವಣ್ಣ ಉತ್ತರ ನೀಡಿಲ್ಲ. ಅಲ್ಲದೆ, ಕಳೆದ ಹದಿನೈದು ದಿನಗಳಿಂದ ಯಾರ ಸಂಪರ್ಕಕಕ್ಕೂ ಸಿಕ್ಕಿಲ್ಲ. ಮೇ 04 ರಂದು ಸಂತ್ರಸ್ತೆಯರ ಸ್ಥಳ ಮಹಜರಿನ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ಹಾಜರಿದ್ದರು. ಆ ನಂತರ ಮೇ 06ರಂದು ಹೊಳೆನರಸೀಪುರದ ಮನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಭವಾನಿಯನ್ನು ಬೇಟಿಯಾಗಿದ್ದರು. ಶಾಸಕರನ್ನು ಭೇಟಿಯಾದ ನಂತರ ಹೊಳೆನರಸೀಪುರ ಮನೆಯಿಂದ ಭವಾನಿ ರೇವಣ್ಣ ಹೊರ ಹೋಗಿದ್ದರು.ಆ ನಂತರ, ಅಂದರೆ ಮೇ 08 ರಿಂದ ಯಾರ ಸಂಪರ್ಕಕಕ್ಕೂ ಸಿಕ್ಕಿಲ್ಲ.