ನ್ಯೂಸ್

ಹೆರಿಗೆಗೆಂದು ದಾಖಲಾದ್ರು; ಆಸ್ಪತ್ರೆ ಬಿಲ್​ ಕಟ್ಟೋಕೆ ಗಂಡು ಶಿಶುವನ್ನೇ ಮಾರಿದರು...!

ಆಗ್ರಾ: ಹೆರಿಗೆಗೆಂದು ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದಳಾ ತಾಯಿ..., ಆದರೆ, ಆಸ್ಪತ್ರೆಯ ಬಿಲ್​ ಕಟ್ಟೋಕೆ ಹಣವಿಲ್ಲದೇ, ಆಗಷ್ಟೇ ಜನಿಸಿದ ಗಂಡುಮಗುವನ್ನೇ ಮಾರಿ ಹಣ ಪಾವತಿಸಿದ್ದಾರೆ ದಂಪತಿ.

ಉತ್ತರಪ್ರದೇಶ ಆಗ್ರಾದ ದಲಿತ ದಂಪತಿಯ ನೋವಿನ ಕತೆಯಿದು. ಇಲ್ಲಿನ ಆಸ್ಪತ್ರೆಯೊಂದರಲ್ಲಿ ಬಬಿತಾ ಎಂಬಾಕೆ ಆಗಸ್ಟ್​ 24ರಂದು ಸಿಸೇರಿಯನ್​ ಮೂಲಕ ಗಂಡುವಿಗೆ ಜನ್ಮ ನೀಡಿದ್ದರು. ಶಸ್ತ್ರಚಿಕಿತ್ಸೆಗಾಗಿ 30 ಸಾವಿರ ರೂ. ಹಾಗೂ ಔಷಧ ವೆಚ್ಚವಾಗಿ 5,000 ರೂ. ಪಾವತಿಸಬೇಕಿತ್ತು. ಆದರೆ, ಈಕೆಯ ಪತಿ ಶಿವ್​ಚರಣ್​ ರಿಕ್ಷಾ ಚಲಾಯಿಸುವ ಕೆಲಸ ಮಾಡುತ್ತಾರೆ. ಆಸ್ಪತ್ರೆಯ ಬಿಲ್​ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಗುವನ್ನು ಒಂದು ಲಕ್ಷ ರೂ. ಮಾರಿದ್ದಾರೆ.

ಎಲ್ಲ ದಾಖಲೆಗಳಿಗೂ ಸಹಿ ಮಾಡಿಸಿಕೊಂಡರು: ದಂಪತಿ ಅನಕ್ಷರಸ್ಥರಾಗಿದ್ದು, ಆಸ್ಪತ್ರೆಯವರು ಹೇಳಿದ ಎಲ್ ದಾಖಲೆಗಳ ಮೇಲೆ ಹೆಬ್ಬಟ್ಟು ಸಹಿ ಹಾಕಿದ್ದಾರೆ. ಪ್ರತಿಯಾಗಿ ದಂಪತಿಗೆ ಒಂದು ಲಕ್ಷ ರೂ. ಚೆಕ್​ ನೀಡಿ ಕಳುಹಿಸಲಾಗಿದೆ. ದಂಪತಿಗೆ ಡಿಸ್ಚಾರ್ಜ್​ ದಾಖಲೆಗಳನ್ನು ನೀಡಿಲ್ಲ ಎಂದು ದೂರಲಾಗಿದೆ.

ಗಂಭೀರ ಪ್ರಕರಣವೆಂದ ಜಿಲ್ಲಾಡಳಿತ: ಇದೊಂದು ಗಂಭೀರ ಪ್ರಕರಣವೆಂದು ತಿಳಿಸಿರುವ ಜಿಲ್ಲಾಡಳಿತ ತನಿಖೆ ನಡೆಸುವುದಾಗಿ ಹೇಳಿದೆ. ಆದರೆ, ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆಯವರು, ದಂಪತಿ ತಾವಾಗಿಯೇ ಮಗುವನ್ನು ಬಿಟ್ಟುಕೊಟ್ಟಿದ್ದಾರೆ. ದಾಖಲೆಗಳಿಗೂ ಸಹಿ ಮಾಡಿದ್ದಾರೆ ಎನ್ನುತ್ತಾರೆ ಜೆಪಿ ಆಸ್ಪತ್ರೆ ವೈದ್ಯರು.

ಬಾಡಿಗೆ ಮನೆಯಲ್ಲಿ ವಾಸಿಸುವ ದಲಿತ ದಂಪತಿಗೆ ಐವರು ಮಕ್ಕಳಿದ್ದಾರೆ. ಹಿರಿಯ ಮಗ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್​ ಸಂಕಷ್ಟದಿಂದಾಗಿ ಕೆಲಸ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ದಂಪತಿಗೆ ಆಯುಷ್ಮಾನ್​ ಭಾರತ್​ ಯೋಜನೆಯ ಸೌಲಭ್ಯವೂ ಸಿಕ್ಕಿಲ್ಲ ಎಂದು ದೂರಲಾಗಿದೆ.