ನ್ಯೂಸ್

ಕರೊನಾ ಲಸಿಕೆ ಮಾನವರ ಮೇಲೂ ಯಶಸ್ವಿ..! ವರ್ಷಾಂತ್ಯಕ್ಕೆ ಬಳಕೆಗೆ

ನವದೆಹಲಿ: ಕರೊನಾ ವೈರಸ್​ ನಿಗ್ರಹಕ್ಕಾಗಿ ಅಮೆರಿಕದಲ್ಲಿ ಮೊದಲ ಬಾರಿಗೆ ಮಾನವರ ಮೇಲೆ ಪ್ರಯೋಗಿಸಿದ ಲಸಿಕೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗಿದೆ. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಕಂಪನಿಯ ಷೇರುಗಳ ಮೌಲ್ಯ ಶೇ.40 ಏರಿಕೆ ಕಂಡಿದೆ.

ಮಾನವರ ಬಳಕೆಗೆ ಸುರಕ್ಷಿತವಾಗಿದೆ ಹಾಗೂ ದೇಹದಲ್ಲಿ ಕರೊನಾ ವೈರಸ್​ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತಿದೆ ಎಂದು ಔಷಧ ತಯಾರಕ ಕಂಪನಿ ಮಾಡೆರ್ನಾ ಹೇಳಿಕೊಂಡಿದೆ.

ಕಳೆದ ಮಾರ್ಚ್​ ಆರಂಭದಲ್ಲಿ ಎಂಟು ಜನರಿಗೆ ಎರಡು ಡೋಸ್​ ಲಸಿಕೆ ನೀಡಲಾಗಿತ್ತು. ಅವರನ್ನು ಪರೀಕ್ಷೆಗೊಳಡಿಸಿದಾಗ ಈ ಫಲಿತಾಂಶ ಕಂಡುಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಲಸಿಕೆ ಪಡೆದವರು ಆರೋಗ್ಯವಂತ ಪ್ರಯೋಗಾರ್ಥಿಗಳಾಗಿದ್ದರು. ಅವರಿಗೆ ಲಸಿಕೆ ನೀಡಿದ ಬಳಿಕ ಅವರ ದೇಹದಲ್ಲಿ ಉಂಟಾದ ಪ್ರತಿಕಾಯಗಳನ್ನು ಬಳಸಿ ಕರೊನಾಪೀಡಿತ ಜೀವಕೋಶಗಳ ಮೇಲೆ ಪರೀಕ್ಷೆ ನಡೆಸಲಾಯಿತು. ಇದು ಕರೊನಾ ವೈರಸ್​ ವೃದ್ಧಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಲಸಿಕೆ ತಯಾರಿಕೆಗೆ ಬೇಕಾದ ಮಹತ್ವದ ಘಟ್ಟವನ್ನು ತಲುಪಿದಂತಾಗಿದೆ ಎಂದು ಕಂಪನಿ ತಿಳಿಸಿದೆ.

ಇದಲ್ಲದೇ, ಕರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡುಬಂದ ಪ್ರತಿಕಾಯಗಳು ಹಾಗೂ ಪ್ರಯೋಗಾಲಯದಲ್ಲಿ ಪ್ರಯೋಗಿಸಿದಾಗ ಉಂಟಾದ ಪ್ರತಿಕಾಯಗಳಲ್ಲೂ ಸಾಮ್ಯತೆ ಕಂಡುಬಂದಿರುವುದಾಗಿಯೂ ಮಾಡೆರ್ನಾ ಘೋಷಿಸಿದೆ.

ಶೀಘ್ರವೇ ಎರಡನೇ ಹಂತದ ಪರೀಕ್ಷೆಯಲ್ಲಿ 600 ಜನರ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತದೆ. ನಂತರ ಸಾವಿರಾರು ಜನರ ಮೇಲೆ ಪ್ರಯೋಗಿಸಲಾಗುವ ಮೂರನೇ ಹಂತದ ಪರೀಕ್ಷೆ ಜುಲೈನಲ್ಲಿ ನಡೆಯಲಿದೆ. ಎರಡನೇ ಹಂತದ ಪರೀಕ್ಷೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಇತ್ತೀಚೆಗಷ್ಟೇ ಅನುಮತಿ ನೀಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಈ ವರ್ಷಾಂತ್ಯಕ್ಕೆ ಅಥವಾ 2021ರ ಆರಂಭದಲ್ಲಿ ಸಾರ್ವತ್ರಿಕ ಬಳಕೆಗಾಗಿ ಲಸಿಕೆ ಸಿದ್ಧವಾಗಲಿದೆ ಎಂದು ಕಂಪನಿಯ ಮುಖ್ಯ ವೈದ್ಯಾಧಿಕಾರಿ ಟಾಲ್​ ಝಾಕ್ಸ್​ ಹೇಳಿದ್ದಾರೆ.

ಮೊದಲ ಹಂತದ ಪರೀಕ್ಷೆಯಲ್ಲಿ ಕಡಿಮೆ, ಮಧ್ಯಮ ಹಾಗೂ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಲಾಗಿತ್ತು. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಲಸಿಕೆ ಪಡೆದವರಲ್ಲಿ ಈ ಫಲಿತಾಂಶ ಕಂಡುಬಂದಿದೆ. ಒಬ್ಬ ವ್ಯಕ್ತಿಗೆ ಲಸಿಕೆ ನೀಡಿದ ಜಾಗದಲ್ಲಿ ಕೆಂಪಾಗಿರುವುದು ಹಾಗೂ ಊದಿಕೊಂಡಿರುವುದು ಕಂಡುಬಂದಿದೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ಪಡೆದವರಿಗೆ ಜ್ವರ, ತಲೆನೋವು, ಸ್ನಾಯು ಸೆಳೆತ ಉಂಟಾಗಿದೆ ಎಂದು ಝಾಕ್ಸ್​ ಮಾಹಿತಿ ನೀಡಿದ್ದಾರೆ.

ಕಡಿಮೆ ಡೋಸ್​ ಪರಿಣಾಮಕಾರಿಯಾಗುತ್ತಿರುವುದರಿಂದ ಮುಂದಿನ ಹಂತದಲ್ಲಿ ಜಾಸ್ತಿ ಡೋಸ್​ ನೀಡುವುದನ್ನು ತಡೆಯಲಾಗುತ್ತದೆ. ಕಡಿಮೆ ಡೋಸ್​ನಲ್ಲಿ ಪರಿಣಾಮಕಾರಿಯಾದರೆ ಲಸಿಕೆ ತಯಾರಿಯೂ ಸುಲಭವಾಗಲಿದೆ ಎಂದು ಝಾಕ್ಸ್​ ತಿಳಿಸಿದ್ದಾರೆ.