ನ್ಯೂಸ್

ಉದ್ಯಾನವನದ ಹಾಟ್​ಸ್ಟ್ರಿಂಗ್​ನಲ್ಲೇ ಚಿಕನ್​ ಅಡುಗೆ ಮಾಡಿದ ಯುವಕ; ತಕ್ಕ ಶಿಕ್ಷೆ ಕೊಟ್ಟ ಸಿಬ್ಬಂದಿ

Mandara

ವಾಷಿಂಗ್ಟನ್​: ಪ್ರವಾಸಕ್ಕೆ ತೆರಳಿದಾಗ ಹೊರಗಡೆ ಅಡುಗೆ ಮಾಡಿ ತಿನ್ನುವುದು ಸರ್ವೇ ಸಾಮಾನ್ಯ. ಆದರೆ ಉದ್ಯಾನವನಕ್ಕೆ ಹೊದಾಗ ಅಲ್ಲಿನ ಬಿಸಿ ನೀರಿನ ಬುಗ್ಗೆ (ಹಾಟ್​ ಸ್ಪ್ರಿಂಗ್​)ಯಲ್ಲಿಯೇ ಅಡುಗೆ ಮಾಡಿದರೆ? ಅದರಲ್ಲೂ ಎರಡು ಜೀವಂತ ಕೋಳಿಯನ್ನ ಅಲ್ಲೇ ಬೇಯಿಸಿ ತಿಂದುಬಿಟ್ಟರೆ? ಇಂತದ್ದೇ ಒಂದು ಹುಚ್ಚಾಟ ಮಾಡಿದ ಅಮೆರಿಕದ ಪ್ರಜೆಯೊಬ್ಬ ಈಗ ಉದ್ಯಾನವನಕ್ಕೆ ಕಾಲಿಡದಂತಹ ಸ್ಥಿತಿಗೆ ಬಂದು ತಲುಪಿದ್ದಾನೆ.

ಭೌಗೋಳಿಕ ಅದ್ಭುತಗಳು ನಮ್ಮಲ್ಲಿ ಸಾಕಷ್ಟಿದೆ. ಅದರಂತೆ ಒಂದು ಈ ಹಾಟ್​ ಸ್ಪ್ರಿಂಗ್​. ಭೂಮಿಯ ಮೇಲ್ಭಾಗದಲ್ಲಿ ಸದಾ ಬಿಸಿ ಕೆಂಡಂತಿರುವ ಸ್ಥಳದಲ್ಲಿ ನೀರು ತುಂಬಿಕೊಂಡು ನೀರೂ ಸಹ ಬಿಸಿಯಾಗಿರುತ್ತದೆ. ಬಹುತೇಕ ಹಾಟ್​ ಸ್ಪ್ರಿಂಗ್​ಗಳು ಸಾಮಾನ್ಯ ಬಿಸಿ ನೀರನ್ನು ಹೊಂದಿರುತ್ತದೆ. ಆದರೆ ಎಲ್ಲೋ ಕೆಲವು ಹಾಟ್​ ಸ್ಪ್ರಿಂಗ್​ಗಳಲ್ಲಿ ಕುದಿಯುವಷ್ಟು ಬಿಸಿ ನೀರು ಸಹ ಇರುತ್ತದೆ. ಇಂಥಹ ವಿಶೇಷ ಹಾಟ್​ ಸ್ಪ್ರಿಂಗ್​ಗಳನ್ನು ನಾವು ಅಮೆರಿಕದ ಯೆಲ್ಲೋಸ್ಟೋನ್​ ಪಾರ್ಕ್​ನಲ್ಲಿ ಕಾಣಬಹುದು.

ಆಗಸ್ಟ್​ ತಿಂಗಳಲ್ಲಿ 10 ಜನರ ಯುವಕರ ಗುಂಪು ಈ ಯೆಲ್ಲೋಸ್ಟೋನ್​ ಪಾರ್ಕ್​ಗೆ ತೆರಳಿತ್ತು. ಸುಮ್ಮನೆ ಹೋಗದ ಈ ಗುಂಪು ಎರಡು ಕೋಳಿ ಮತ್ತು ಅದನ್ನು ಬೇಯಿಸಿ ತಿನ್ನಲು ಬೇಕಾದ ಪಾತ್ರೆ, ಉಪ್ಪು, ಕಾರವನ್ನೂ ತೆಗೆದುಕೊಂಡು ಹೋಗಿತ್ತು. ಹಾಟ್​​ ಸ್ಪ್ರಿಂಗ್​ನ ಬಿಸಿ ನೀರಿನಲ್ಲಿ ಕೋಳಿ ಬೇಯಿಸಿಕೊಂಡು ತಿನ್ನುವುದು ಅವರ ಉದ್ದೇಶವಾಗಿತ್ತು. ಆದರೆ ಇದನ್ನು ಗಮನಿಸಿದ ಪಾರ್ಕ್​ ಸಿಬ್ಬಂದಿ ಗುಂಪನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದೆ. ಅದರೆ ಆ ಸಮಯದಲ್ಲಿ ಒಂಬತ್ತು ಜನರು ತಪ್ಪಿಸಿಕೊಂಡಿದ್ದು, ಒಬ್ಬ ಮಾತ್ರ ಸಿಕ್ಕಿಹಾಕಿಕೊಂಡಿದ್ದಾನೆ.

ತಪ್ಪೊಪ್ಪಿಕೊಂಡಿರುವ ಆತನಿಗೆ ಎರಡು ವರ್ಷಗಳ ಕಾಲ ಪಾರ್ಕ್​ಗೆ ಬಾರದಿರುವಂತೆ ನಿರ್ಬಂಧ ಹೇರಲಾಗಿದೆ. ಅದರ ಜತೆಗೆ 600 ಡಾಲರ್​ ದಂಡವನ್ನು ವಿಧಿಸಲಾಗಿದೆ. ಪ್ರಕೃತಿ ಜತೆಯಲ್ಲಿ ಆಟವಾಡಲು ಹೋದ ಯುವಕನಿಗೆ ಇದೀಗ ತನ್ನ ತಪ್ಪಿನ ಅರಿವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.