ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವದಂದು ರೈತರು ನಿಗದಿ ಮಾಡಿರುವ ಟ್ರ್ಯಾಕ್ಟರ್ ರ‍್ಯಾಲಿಯನ್ನು ತಡೆಯುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ.
ಕೃಷಿ ಕಾಯ್ದೆಗಳನ್ನು ರದ್ದು ಮಾಡದೇ ಮುಂದುವರಿಸಿದರೆ, ಜನವರಿ 26ರಂದು ಬೃಹತ್ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಹರಿಯಾಣ ರೈತರು ರ‍್ಯಾಲಿ ನಡೆಸಲು ಯೋಜನೆ ರೂಪಿಸಿದ್ದು, ಪ್ರತಿ ಗ್ರಾಮದಿಂದ ಒಂದು ಟ್ರ್ಯಾಕ್ಟರ್ ಪ್ರತಿಭಟನಾ ರ‍್ಯಾಲಿಯಲ್ಲಿ ಸೇರಲಿದೆ. ಸುಮಾರು 20,000 ಟ್ರ್ಯಾಕ್ಟರ್ ಗಣರಾಜ್ಯೋತ್ಸವದಂದು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸುಪ್ರೀ ಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಅಫಿಡೆವಿಟ್ ಸಲ್ಲಿಸಿದ್ದು, ಗಣರಾಜ್ಯೋತ್ಸವ ಸಾಂವಿಧಾನಿಕ ಮತ್ತು ಐತಿಹಾಸಿಕ ಮಹತ್ವದ ದಿನವಾಗಿದ್ದು, ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಜ. 23ರಂದು ಅದ್ಧೂರಿ ಪೂರ್ವಾಭ್ಯಾಸ, ಜ.28ರಂದು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ರ‍್ಯಾಲಿ, ಜ. 29ರಂದು ಬೀಟಿಂಗ್ ರಿಟ್ರೀಟ್ ಮಿಲಿಟರಿ ಸಮಾರಂಭ ಮತ್ತು ಜ.30ರಂದು ಹುತಾತ್ಮರ ದಿನ ಆಚರಿಸಲಾಗುತ್ತದೆ. ಈ ವೇಳೆ ಯಾವುದೇ ಅಡಚಣೆಗಳು ಕೇವಲ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಹಿತಾಸಕ್ತಿ, ಸಾರ್ವಜನಿಕ ಆದೇಶಕ್ಕೆ ವಿರುದ್ಧವಾಗಿರದೆ, ಇಡೀ ರಾಷ್ಟ್ರವನ್ನೇ ದೊಡ್ಡ ಮುಜುಗರಕ್ಕೆ ದೂಡುತ್ತದೆ ಎಂದು ಕೇಂದ್ರ ಸರ್ಕಾರ ಅಫಿಡೆವಿಟ್ನಲ್ಲಿ ಮನವಿ ಮಾಡಿಕೊಂಡಿದೆ.
ಕೃಷಿ ಕಾಯ್ದೆಯ ಬಗ್ಗೆ ಕೋರ್ಟ್ಗೆ ಮಾಹಿತಿ ನೀಡಿರುವ ಸರ್ಕಾರ, ಕಾಯ್ದೆಗಳನ್ನು ಆತುರವಾಗಿ ಮಾಡಿಲ್ಲ. ಇದು ಎರಡು ದಶಕಗಳ ಚರ್ಚೆಗಳ ಫಲಿತಾಂಶವಾಗಿದೆ. ಕಾಯ್ದೆಯಲ್ಲಿ ಅಸ್ತಿತ್ವದಲ್ಲಿರುವ ಮತ್ತು ಅದಕ್ಕಿಂತ ಹೆಚ್ಚುವರಿ ಆಯ್ಕೆಯನ್ನು ನೀಡಲಾಗಿರುವುದರಿಂದ ದೇಶದ ರೈತರು ಸಂತೋಷವಾಗಿದ್ದಾರೆ. ಕಾಯ್ದೆಯಲ್ಲಿ ಯಾವುದೇ ಪಟ್ಟಭದ್ರ ಹಕ್ಕನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದೆ.
ರೈತರ ಮನಸ್ಸಿನಲ್ಲಿರುವ ತಪ್ಪು ಗ್ರಹಿಕೆಗಳು ಮತ್ತು ಅನುಮಾನಗಳನ್ನು ತೆಗೆದುಹಾಕಲು ರೈತರೊಂದಿಗೆ ತೊಡಗಿಸಿಕೊಳ್ಳಲು ಸರ್ಕಾರ ಈವರೆಗೆ ಅತ್ಯುತ್ತಮ ಪ್ರಯತ್ನವನ್ನು ಮಾಡಿದೆ. ಕೇಂದ್ರದ ಯಾವುದೇ ಪ್ರಯತ್ನಗಳಲ್ಲಿ ಕೊರತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡೆವಿಟ್ನಲ್ಲಿ ಹೇಳಿದೆ.
ನಿನ್ನೆ ಬೆಳಗ್ಗೆ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಟ್ರ್ಯಾಕ್ಟರ್ ರ‍್ಯಾಲಿ ಸಮಸ್ಯೆಯನ್ನು ಕೋರ್ಟ್ ಮುಂದೆ ಧ್ವನಿಯೆತ್ತಿದ್ದರು ಮತ್ತು ರ‍್ಯಾಲಿಯನ್ನು ತಡೆಯಬೇಕಾಗಿದೆ ಎಂದು ಮನವಿ ಮಾಡಿದರು. ಇದಾದ ಬಳಿಕ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅಫಿಡೆವಿಟ್ ಸಲ್ಲಿಸಲು ಕೇಂದ್ರ ಸರ್ಕಾರವನ್ನು ಕೋರಿದರು.
ದೇಶಾದ್ಯಂತ ರೈತರ ಹೋರಾಟಕ್ಕೆ ಕಾರಣವಾಗಿರುವ ಕೃಷಿ ಸುಧಾರಣಾ ಕಾಯ್ದೆಗಳನ್ನು ಸದ್ಯದ ಮಟ್ಟಿಗೆ ತಡೆ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸಮಿತಿ ರೈತರ ನಡುವೆ ಒಂದು ಒಪ್ಪಂದ ಬರುವವರೆಗೂ ತಡೆ ನೀಡಬೇಕೆಂದು ತಿಳಿಸಲಾಗಿದೆ. (ಏಜೆನ್ಸೀಸ್)