More

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವಸಿಡಿಲ ಸಂತ ಸ್ವಾಮಿ ವಿವೇಕಾನಂದರು ಯುವಕರಲ್ಲಿನ ಅಪಾರ ಶಕ್ತಿಯನ್ನು ಗುರುತಿಸಿ, ಅದನ್ನು ರಾಷ್ಟ್ರನಿರ್ಮಾಣದಲ್ಲಿ ತೊಡಗುವಂತೆ ಮಾಡಿದವರು. ಆ ಆದರ್ಶದ ಬೆಳಕಿನಲ್ಲಿ ಸಾಗುತ್ತಿರುವ ಅದೆಷ್ಟೋ ಯುವಕ-ಯುವತಿಯರು ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಯುವ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಗೆದ್ದುಬಂದಿದ್ದು, ಅಭಿವೃದ್ಧಿಯ ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಉನ್ನತ ಶಿಕ್ಷಣ ಪಡೆದ, ವಿವಿಧ ವೃತ್ತಿಯಲ್ಲಿದ್ದ ಯುವಕರು ಗ್ರಾಮಾಭಿಮುಖಿ ಆಗಿರುವುದು ಭರವಸೆಯ ಕಿರಣವೇ ಸರಿ. ರಾಷ್ಟ್ರೀಯ ಯುವದಿನದ ನಿಮಿತ್ತ ‘ವಿಜಯವಾಣಿ’ ಕೆಲವು ಯುವ ಗ್ರಾ.ಪಂ. ಸದಸ್ಯರನ್ನು, ಅವರ ಕನಸುಗಳನ್ನು ಪರಿಚಯಿಸಿದೆ.

    ಅಭಿವೃದ್ಧಿ ಕನಸಿನ ಜಾದೂಗಾರ…

    ‘ಕಲ್ಲುಕುಟಿಕರು, ಕೂಲಿಕಾರ್ವಿುಕರ ಮಕ್ಕಳು ಒಳಗೊಂಡಂತೆ ಕ್ಷೇತ್ರದ ಎಲ್ಲ ವರ್ಗದ ಮಕ್ಕಳನ್ನು ಕನಿಷ್ಠ ಪದವಿವರೆಗೆ ಓದಿಸುವ ಸಂಕಲ್ಪ ನನ್ನದು. ಕಸವಿಲೇವಾರಿಯಲ್ಲಿ ಜಿಲ್ಲೆಗೆ ನನ್ನ ಕ್ಷೇತ್ರ ಮಾದರಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಅದನ್ನು ಕಾರ್ಯಗತಗೊಳಿಸುತ್ತೇನೆ’.

    ಇದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮೇಲಿನಕುರುವಳ್ಳಿ ಗ್ರಾಪಂ ನೂತನ ಸದಸ್ಯ, ಜಾದೂಗಾರ ನಿಶ್ಚಲ್ ಶೆಟ್ಟಿ ಕನಸು. ಬಿಎ ವ್ಯಾಸಂಗ ಮಾಡಿರುವ ನಿಶ್ಚಲ್, ತಮ್ಮ 8ನೇ ವರ್ಷದಲ್ಲೇ ಜಾದೂಗಾರರಾಗಿ ಸೈ ಎನಿಸಿಕೊಂಡಿದ್ದರು. ಹಾಲಿ ರೈತ ಸಂಘದ ಹಸಿರು ಸೇನೆಯ ತೀರ್ಥಹಳ್ಳಿ ತಾಲೂಕು ಮುಖ್ಯಸ್ಥ ಹಾಗೂ ಮಲೆನಾಡು ಸಂಘರ್ಷ ಕ್ರಿಯಾಸಮಿತಿಯ ಯುವ ಘಟಕದ ಅಧ್ಯಕ್ಷ. ‘ನಮ್ಮೂರಿಗೆ ಅಕೇಶಿಯಾ ಬೇಡ’ ಹೋರಾಟದಲ್ಲಿ ಒಂದೂವರೆ ವರ್ಷದಿಂದ ಸಕ್ರಿಯರಾಗಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಗೆದ್ದ ಎರಡೇ ದಿನಕ್ಕೆ ಜನಸಂಪರ್ಕ ಕಚೇರಿ ತೆರೆದಿದ್ದಾರೆ. ಸಮಾಜದಲ್ಲಿರುವ ಭ್ರಷ್ಟಾಚಾರದ ನಿಮೂಲನೆಯೇ ಪ್ರಮುಖ ಗುರಿ ಎನ್ನುತ್ತಾರೆ.

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ನಿಶ್ಚಲ್​ ಶೆಟ್ಟಿ

    ಕುರುವಳ್ಳಿಯಲ್ಲಿ ಡೋಂಬರ ಟೆಂಟ್​ಗಳಿದ್ದು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಪಂ ಸಹಕಾರದಲ್ಲಿ ಶೌಚಗೃಹ, ವಿದ್ಯುತ್ ಸಂಪರ್ಕ, ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿದ್ದೇನೆ. ಅವರ ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಿದ್ದು ಅದರಲ್ಲೊಬ್ಬ ಈ ಬಾರಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ.

    | ನಿಶ್ಚಲ್ ಶೆಟ್ಟಿ

    ಜನರ ಪರದಾಟ ತಪ್ಪಬೇಕು

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಕಾವ್ಯ ಮೈಲಾರಿ

    22 ವರ್ಷ ವಯಸ್ಸಿನ ಕಾವ್ಯ ಮೈಲಾರಿ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ವಿವಾಹಿತೆ ಆಗಿರುವ ಇವರು, ಬಿ.ಎ. ಪದವಿ ಪೂರೈಸಿದ್ದಾರೆ. ಸ್ವಅನುಭವವೇ ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣ ಮತ್ತು ಪ್ರೇರಣೆ ಎನ್ನತ್ತಾರೆ ಕಾವ್ಯ. ಬಡಕುಟುಂಬದಿಂದ ಬಂದಿರುವ ಕಾವ್ಯ ಕೊಟ್ಟಿಗೆ ಮನೆಯಲ್ಲಿ ಹುಟ್ಟಿ ಬೆಳೆದವರು. ಈ ಹಿನ್ನೆಲೆಯಲ್ಲಿ ಒಂದು ಭದ್ರವಾದ ಸೂರು ಹೊಂದಲು ಪ್ರಯತ್ನಪಟ್ಟು ವಿಫಲರಾದವರು, ಆಶ್ರಯಮನೆಗಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಹೈರಾಣರಾದವರು. ಅರ್ಹತೆಯಿದ್ದರೂ ವಸತಿ ಸೌಲಭ್ಯ ಸಿಗಲಿಲ್ಲ. ಇವರಂತೆಯೇ ಬಡತನದ ಬೇಗೆಯಲ್ಲಿ ಬೆಂದ ಬಹಳಷ್ಟು ಅರ್ಹ ಫಲಾನುಭವಿಗಳಿಗೂ ಆಶ್ರಯ ಮನೆ ಈಗಲೂ ಮರೀಚಿಕೆಯಾಗಿದೆ. ಈ ಕಹಿ ಅನುಭವವೇ ರಾಜಕೀಯರಂಗಕ್ಕೆ ಧುಮುಕಲು ಅವರಿಗೆ ಕಾರಣವಾಗಿದೆ.

    ‘ಬಡವರಿಗೆ ಆಶ್ರಯ ಮನೆಯೇ ಅರಮನೆ. ಅದಕ್ಕಾಗಿ ಬಹಳಷ್ಟು ಜನರು ಹಂಬಲಿಸುತ್ತಾರೆ. ಅದು ದೊರೆಯದಿದ್ದರೆ ನಿರಾಸೆಯಾಗಿ ವ್ಯವಸ್ಥೆ ವಿರುದ್ಧ ಹತಾಶರಾಗುತ್ತಾರೆ. ಇಂದಿಗೂ ಸರ್ಕಾರಿ ಸೌಲಭ್ಯಗಳು ಬಡವರಿಗೆ ಸರಳವಾಗಿ ಸಿಗಲ್ಲ. ಅದಕ್ಕಾಗಿ ಲಂಚ ಕೊಟ್ಟು, ರಾಜಕಾರಣಿಗಳಿಂದ ಶಿಫಾರಸು ಮಾಡಿಸಬೇಕೆಂಬ ಭಾವ ಬೇರೂರಿದೆ. ಹೀಗಾಗಿಯೇ ಜನರು ಸರ್ಕಾರಿ ಸೌಲಭ್ಯ ಪಡೆಯಲು ಮುಂದೆ ಬರಲ್ಲ. ಇದು ತಪ್ಪಬೇಕು. ಅರ್ಹರನ್ನು ಹುಡುಕಿಕೊಂಡು ಹೋಗಿ ಸೌಲಭ್ಯ ತಲುಪಿಸುವಂಥ ವಾತಾವರಣ ನಿರ್ವಣವಾಗಬೇಕು. ನನಗೆ ಆದ ಕೆಟ್ಟ ಅನುಭವ ಉಳಿದವರಿಗೆ ಆಗಬಾರದು. ಅದಕ್ಕಾಗಿ ನಾನು ರಾಜಕೀಯಕ್ಕೆ ಬಂದಿರುವೆ. ನನ್ನ ಇತಿಮಿತಿಯಲ್ಲೇ ಕಡುಬಡವರಿಗೆ ಮನೆ ಕೊಡಿಸಲು ಶ್ರಮಿಸುತ್ತೇನೆ. ಇದುವೇ ನನ್ನ ಮೊದಲ ಆದ್ಯತೆ’ ಎಂದು ಕಾವ್ಯ ವಿಶ್ವಾಸದಿಂದ ಹೇಳುತ್ತಾರೆ.

    ಜನಸೇವೆಯ ಬಯಕೆ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಎಚ್. ಸವಿತಾ

    ಸಿವಿಲ್ ವಿಭಾಗದಲ್ಲಿ ಡಿಪ್ಲೊಮಾ ಪೂರೈಸಿ, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ದೇವಗೊಂಡನಹಳ್ಳಿಯ ಎಚ್.ಸವಿತಾ ಗ್ರಾಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. 24 ವರ್ಷದ ಸವಿತಾ ಹುಟ್ಟೂರಿನ ಅಭಿವೃದ್ಧಿಯ ಕನಸಿಟ್ಟುಕೊಂಡು ಬೆಂಗಳೂರಿನ ಉದ್ಯೋಗಕ್ಕೆ ವಿದಾಯ ಹೇಳಿ ಚುನಾವಣೆಗೆ ಸ್ಪರ್ಧಿಸಿದ್ದರು. 64 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಜನರ ಸೇವೆ ಮಾಡಬೇಕೆಂಬ ದೃಷ್ಟಿಯಿಂದ ಗ್ರಾಮಕ್ಕೆ ಬಂದಿದ್ದೇನೆ. ಜನಪ್ರತಿನಿಧಿಯಾಗಿ ಕೆಲಸ ಮಾಡುವುದು ನನಗೂ ಹೊಸ ಅನುಭವ. ಸದಸ್ಯೆಯಾಗಿ ಏನೆಲ್ಲ ಮಾಡಲು ಸಾಧ್ಯವಿದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಸವಿತಾ.

    ಗ್ರಾಮಸೇವೆಯೇ ಗುರಿ, ಎಂಟೆಕ್ ಪದವೀಧರನಿಗೆ ಗೆಲುವಿನ ಗರಿ

    ಓದಿದ್ದು ಎಂಟೆಕ್. ಕೈತುಂಬ ಸಂಬಳ, ಮಹಾನಗರದ ರಂಗಿನ ಜೀವನವನ್ನು ಬಿಟ್ಟು ಗ್ರಾಮದಲ್ಲೇ ಕಾರ್ಯನಿರ್ವಹಿಸಿ ಜಯಿಸಬೇಕು ಎಂಬ ಹೆಬ್ಬಯಕೆ ಹೊತ್ತು ಊರಿಗೆ ಬಂದು ಕಾರ್ಯನಿರ್ವಹಿಸುತ್ತಿರುವವರು ಶಿರಸಿ ತಾಲೂಕಿನ ಭೈರುಂಬೆಯ ಕಿರಣ ಭಟ್. 30 ವರ್ಷ ವಯಸ್ಸಿನ ಅವರು ಭೈರುಂಬೆ ವಾರ್ಡ್​ನಿಂದ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೆಕ್ಯಾನಿಕಲ್​ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ನಂತರ ಥರ್ವೆ ಡೈನಮಿಕ್ಸ್ ನಲ್ಲಿ ಎಂಟೆಕ್ ಓದಿದ್ದರು. ರಾಜ್ಯದ ಜನಪ್ರಿಯ ಸುದ್ದಿವಾಹಿನಿಗಳಲ್ಲಿ, ಆನ್​ಲೈನ್ ವೆಬ್​ಪತ್ರಿಕೆಗಳಲ್ಲಿ ಕೆಲ ವರ್ಷ ಕೆಲಸ ಮಾಡಿದ್ದರು.

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಕಿರಣ್​ ಭಟ್

    2016ರಲ್ಲಿ ಊರಿಗೆ ಮರಳಿದ ಅವರು ಇಲೆಕ್ಟ್ರಿಕಲ್ ಗುತ್ತಿಗೆ ಮಾಡಿಕೊಂಡಿದ್ದಾರೆ. ಗ್ರಾಮದ ಯುವಕರನ್ನು ಸೇರಿಸಿ ‘ಕಲರವ’ ಸೇವಾ ಸಂಸ್ಥೆ ಕಟ್ಟಿಕೊಂಡಿದ್ದು, ಗ್ರಾಮದ ಪ್ರವಾಸಿತಾಣಗಳಲ್ಲಿ ಸ್ವಚ್ಛತೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಗ್ರಾಮದಲ್ಲಿ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಸರ್ಕಾರದ ಸೌಲಭ್ಯಗಳನ್ನು ಹಕ್ಕಿನಿಂದ ಪಡೆಯುವ ಕಾಲ ಬರಬೇಕು ಎಂಬುದು ಅವರ ಬಯಕೆ. ಆದರೆ, ಅದಕ್ಕೆ ಈ ವ್ಯವಸ್ಥೆಯಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದೆನಿಸಿ ತಾವೇ ಚುನಾವಣೆಗೆ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ.ಗ್ರಾಮದಲ್ಲಿ ಒಂದು ಸಹಾಯವಾಣಿ ಆರಂಭಿಸಿ ಆ ಮೂಲಕ ಜನರಿಗೆ ಪಟ್ಟಣದಿಂದ ಔಷಧ ತಂದುಕೊಡುವುದು, ಅಗತ್ಯ ಸಾಮಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸುವುದು ಅವರ ಮುಂದಿನ ಯೋಜನೆಯಾಗಿದೆ.

    ಗ್ರಾಮದ ನೀರು, ಸ್ವಚ್ಛತೆ, ರಸ್ತೆ ಮುಂತಾದ ಮೂಲಸೌಕರ್ಯದ ಜತೆಗೆ ಮಲೆನಾಡಿನ ಜನರ ಆದಾಯ ಹೆಚ್ಚಿಸಲು ಅರಣ್ಯ ಹಕ್ಕು ಕಾಯ್ದೆ (ಎಫ್​ಆರ್​ಎ) ಕುರಿತು ಜನರಲ್ಲಿ ಜಾಗೃತಿ ಮೂಡಿಸುವೆ.

    | ಕಿರಣ ಭಟ್

    ಮಾದರಿ ಗ್ರಾಮವಾಗಿಸುವ ಆಶಯ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಸಹನಾ ಕುಂದರ್

    ಉಡುಪಿ ಜಿಲ್ಲೆಯ ಬೆಳ್ಮಣ್ ಗ್ರಾಪಂ ಚುನಾವಣೆಯಲ್ಲಿ ಪಕ್ಷೇತರರಾಗಿ ವಿಜೇತರಾಗಿರುವ ಯುವ ವಕೀಲೆ ಸಹನಾ ಕುಂದರ್ ಸೂಡ ಅಭಿವೃದ್ಧಿಗೆ ನಿರಾಸಕ್ತಿ ವಹಿಸುವ ಜನಪ್ರತಿನಿಧಿಗಳ ನಡೆಗೆ ಬೇಸರಗೊಂಡು, ರಾಜಕಾರಣ ಇಷ್ಟವಿಲ್ಲದಿದ್ದರೂ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದಾರೆ. ಕೃಷಿ ಕುಟುಂಬದ ಬೆಳ್ಮಣ್ ಸೂಡ ಸದಾಶಿವ ಸಾಲ್ಯಾನ್-ಸುಗಂಧಿ ದಂಪತಿ ಪುತ್ರಿ ಸಹನಾ ನಿಟ್ಟೆಯಲ್ಲಿ ಬಿಕಾಂ ಪದವಿ ಪಡೆದು, ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದವರು. ಬೆಂಗಳೂರಲ್ಲಿ ಎರಡೂವರೆ ವರ್ಷ ಕಾನೂನು ತರಬೇತಿ ಪಡೆದು, ಇದೀಗ ಉಡುಪಿ ಕೋರ್ಟ್​ನಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಮಾದರಿ ಗ್ರಾಮವಾಗಿ ರೂಪಿಸುವ ಬಗ್ಗೆ ಮೊದಲು ಮಾದರಿ ವಾರ್ಡ್ ಪರಿಕಲ್ಪನೆ ಸಾಕಾರಗೊಳಿಸುವುದು, ಜನರ ಸಮಸ್ಯೆಗೆ ಸ್ಪಂದಿಸುವುದು, ಗ್ರಾಮದಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕಲ್ಪಿಸುವುದು, ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಜನಪಯೋಗಿ ಯೋಜನೆಗಳನ್ನು ಸಮರ್ಪಕವಾಗಿ ವಾರ್ಡ್​ನ ಪ್ರತೀ ಕುಟುಂಬಕ್ಕೆ ತಲುಪಿಸುವ ಯೋಜನೆ ರೂಪಿಸಿದ್ದಾರೆ.

    ಜ್ಞಾನದ ಬೆಳಕು ಹರಡುವ ಹಂಬಲ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಸುಭಾಷಚಂದ್ರ

    ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂಬ ಸಂಕಲ್ಪದೊಂದಿಗೆ ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿರುವ ಉದನೂರ ಗ್ರಾಮದ 29 ವರ್ಷದ ಯುವಕ ಸುಭಾಷಚಂದ್ರ ಗುಂಡಪ್ಪ ಮೂಲಗೆ ಮೊದಲ ಸಲದ ಸ್ಪರ್ಧೆಯಲ್ಲೇ ವಿಜಯ ಸಾಧಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಸುಭಾಷಚಂದ್ರ ನಂತರ ಐಟಿಐ (ಫಿಟ್ಟರ್), ಬಿಕಾಂ ಪದವಿ ಪೂರ್ಣಗೊಳಿಸಿದ್ದಾರೆ. ‘ಗ್ರಾಮಸ್ಥರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಹುಸಿಗೊಳಿಸುವುದಿಲ್ಲ. ದೂರದೃಷ್ಟಿ ಯೋಜನೆಗಳೊಂದಿಗೆ ಊರಿನ ಅಭಿವೃದ್ಧಿಗೆ ಪ್ರಥಮಾದ್ಯತೆ ಮೇರೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ಸಿದ್ದಗಂಗಾ ಮಠದಲ್ಲಿ ಓದುವಾಗ ನಮಗೆ ಸಮಾಜಸೇವೆಯ ಪರಿಕಲ್ಪನೆ ಮೂಡಿದೆ. ಅಲ್ಲಿ ಪಡೆದ ಜ್ಞಾನವನ್ನು ಸಮಾಜದ ಹಿತಕ್ಕಾಗಿ ಬಳಸುವೆ’ ಎನ್ನುತ್ತಾರೆ ಸುಭಾಷಚಂದ್ರ.

    ಯುವಪೀಳಿಗೆ ಸದೃಢಗೊಳಿಸುವೆ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಓಂಕಾರ ವಿನಾಯಕ

    ಐಟಿ-ಬಿಟಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸುವ ಮಹದಾಸೆಯಿಂದ ಡಿಪ್ಲೊಮಾ ಕೋರ್ಸ್ (ಮೆಕಾನಿಕಲ್ ಇಂಜಿನಿಯರಿಂಗ್) ವ್ಯಾಸಂಗ ಕೈಗೊಂಡಿದ್ದ 24 ವರ್ಷದ ಯುವಕ ಓಂಕಾರ ವಿನಾಯಕ ಹಳದನಕರ, ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಪಂ 8ನೇ ವಾರ್ಡ್ ನಿಂದ ಗೆಲುವು ಸಾಧಿಸಿದ್ದಾರೆ. ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಈ ಗ್ರಾಪಂನಲ್ಲಿ ಡಿಪ್ಲೊಮಾ ವ್ಯಾಸಂಗ ಕೈಗೊಂಡು, ಗ್ರಾಪಂ ಗದ್ದುಗೆಯೇರಿದ ಅತಿ ಕಿರಿಯ ಸದಸ್ಯ ಎಂಬುದು ವಿಶೇಷ. ಈತ 246 ಮತ ಪಡೆದು ಗೆಲುವು ಸಾಧಿಸಿದ್ದಾರೆ.

    ‘ನಮ್ಮದು ಕೃಷಿಕ ಕುಟುಂಬ. ಕುಟುಂಬದಲ್ಲಿ ಯಾರೊಬ್ಬರೂ ರಾಜಕಾರಣದಲ್ಲಿಲ್ಲ. ಗ್ರಾಮದಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಪರ ಧ್ವನಿ ಎತ್ತುವ ಸಂಕಲ್ಪದೊಂದಿಗೆ ನೇರವಾಗಿ ಗ್ರಾಪಂನತ್ತ ಮುಖ ಮಾಡಿದ್ದೇನೆ. ಎಲ್ಲ ವರ್ಗಗಳ ಜನರ ಸಂಕಷ್ಟಕ್ಕೂ ದನಿಯಾಗುತ್ತೇನೆ. ತಂತ್ರಜ್ಞಾನ ಬಳಸಿಕೊಂಡು ನನ್ನ ವಾರ್ಡ್ ಅನ್ನು ಅಭಿವೃದ್ಧಿಪಡಿಸುವ ಕನಸು ಹೊತ್ತಿದ್ದೇನೆ’ ಎಂದು ತಮ್ಮ ಮುಂದಿನ ಯೋಜನೆಗಳನ್ನು ಓಂಕಾರ ಹಳದನಕರ ತೆರೆದಿಟ್ಟರು. ನಮ್ಮೂರು ಬೆಳಗಾವಿಗೆ ಹೊಂದಿಕೊಂಡಿರುವ ಕಾರಣ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಲಭ್ಯವಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳುತ್ತೇನೆ. ಮೂಲಸೌಕರ್ಯ ವೃದ್ಧಿಗೆ ಒತ್ತು ನೀಡುತ್ತೇನೆ. ಯುವಪೀಳಿಗೆಗೆ ಹೆಚ್ಚಿನ ಸೌಕರ್ಯ ಕಲ್ಪಿಸಿ, ಅವರನ್ನು ಸದೃಢವಾಗಿಸುತ್ತೇನೆ ಎನ್ನುತ್ತಾರೆ ಓಂಕಾರ.

    ನಿರ್ಲಕ್ಷ್ಯಕ್ಕೆ ಬೇಸತ್ತು ಸ್ಪರ್ಧೆ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಶ್ರೀಕಾಂತ ರವಿ ಲಮಾಣಿ

    ‘ನಮ್ಮ ಕುಟುಂಬಕ್ಕೆ ಮಂಜೂರಾಗಿದ್ದ ಮನೆಯ ಅನುದಾನ ಕೊಡಿಸಲು ಮುಂದಾಗದ ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ ್ಯ ಧೋರಣೆಯಿಂದ ಬೇಸತ್ತು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಜನರ ಆಶೀರ್ವಾದದಿಂದ ಸದಸ್ಯನಾಗಿ ಆಯ್ಕೆಯಾಗಿದ್ದೇನೆ’ ಎನ್ನುತ್ತಾರೆ ಶ್ರೀಕಾಂತ ರವಿ ಲಮಾಣಿ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಪಂ ವ್ಯಾಪ್ತಿಯ ಗೆದ್ದಲಮರಿ ತಾಂಡಾದ 25 ವರ್ಷದ ಯುವ ಸದಸ್ಯ ಶ್ರೀಕಾಂತ ತಂದೆ-ತಾಯಿ ಕಳೆದುಕೊಂಡು ಅನಾಥವಾಗಿದ್ದರೂ ಅವರಲ್ಲಿ ಜನರಸೇವೆ ಮಾಡುವ ಹುಮ್ಮಸ್ಸಿದೆ. ಅವರು ಮುದ್ದೇಬಿಹಾಳ ಎಂಜಿವಿಸಿ ಕಾಲೇಜಿನಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದ್ದಾರೆ. ‘ಬಡವರಿಗೆ ಪಂಚಾಯಿತಿ ವ್ಯವಸ್ಥೆಯಲ್ಲಿ ಹೇಗೆಲ್ಲ ಗೋಳಾಡಿಸುತ್ತಾರೆ, ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಜನರು ಯಾವ ರೀತಿ ಪರದಾಡುತ್ತಾರೆ ಎನ್ನುವುದನ್ನು ಕಣ್ಣಾರೆ ಕಂಡಿದ್ದೇನೆ. ನನ್ನ ಕೈಯಿಂದ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಆಲೋಚನೆ ಹೊಂದಿರುವೆ’ ಎಂಬ ಆಶಾಭಾವ ಶ್ರೀಕಾಂತರದ್ದು.

    ಶಿಕ್ಷಣಕ್ಕೆ ಆದ್ಯತೆ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಸಂತೋಷ್ ಕೆ.ಆರ್.

    ರಾಜಕೀಯ ಹಿನ್ನೆಲೆ ಇಲ್ಲದೆ, ಲಕ್ಷಾಂತರ ರೂ. ಖರ್ಚುನ್ನೂ ಮಾಡದೆ, ಜನರ ವಿಶ್ವಾಸ ಗಳಿಸಿ ಹಾಗೂ ತಾನು ಗೆದ್ದರೆ ಮಾಡುವ ಕೆಲಸ ಕಾರ್ಯಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಮತಯಾಚಿಸಿದ 24 ವರ್ಷದ ಯುವಕ ಕೆ.ಆರ್. ಸಂತೋಷ್, ಪ್ರಥಮ ಪ್ರಯತ್ನದಲ್ಲೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಹೊಳೆನರಸೀಪುರ ತಾಲೂಕು ಶ್ರವಣೂರು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿರುವ ಸಂತೋಷ್, ಹುಟ್ಟೂರು ಕಡುವಿನಬಾಚಳ್ಳಿಯ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದಾರೆ. ‘ಪ್ರಗತಿಗೆ ಶಿಕ್ಷಣ ಮುಖ್ಯ ಎಂಬುದು ನನ್ನ ಅನಿಸಿಕೆಯಾಗಿದ್ದು, ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಬಲಪಡಿಸಬೇಕಿದೆ. ಪ್ರೌಢಶಾಲೆ, ಪಿಯುಸಿ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನನ್ನ ವ್ಯಾಪ್ತಿಯಲ್ಲಿ ಆಗಬಹು ದಾದ ಸಹಾಯ ಮಾಡುತ್ತೇನೆ. ರಾಜಕೀಯ ಹಗೆತನ ಬಿಟ್ಟು ಪರಾಭವ ಗೊಂಡವರನ್ನು ಸಹೋದರರಂತೆ ಪರಿಗಣಿಸುತ್ತೇನೆ’ ಎಂಬ ತಮ್ಮ ಕನಸು ಬಿಚ್ಚಿಟ್ಟರು ಸಂತೋಷ್.

    ಅಧಿಕಾರದ ಬ್ಯಾಟಿಂಗ್

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಭರತ್ ಕೆ.ವಿ.

    ‘ಸರ್ಕಾರದಿಂದ ಬಡವರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿ ಅದನ್ನು ಫಲಾನುಭವಿಗಳಿಗೆ ತಲುಪಿಸುವುದಕ್ಕೆ ಆದ್ಯತೆ. ಜತೆಗೆ ವಾರ್ಡ್​ಗೆ ಕುಡಿಯುವ ನೀರು, ರಸ್ತೆ ಸೇರಿ ಮೂಲಸೌಲಭ್ಯ ಕಲ್ಪಿಸುವಲ್ಲಿ ವಿಶೇಷವಾಗಿ ಶ್ರಮಿಸುತ್ತೇನೆ’. ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ 1ನೇ ವಾರ್ಡ್​ನಿಂದ ಗ್ರಾಪಂ ಸದಸ್ಯನಾಗಿ ಆಯ್ಕೆಯಾದ 21 ವರ್ಷದ ಭರತ್ ಕೆ.ವಿ. ಮಾತು. ಪಕ್ಷೇತರನಾಗಿ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಭರತ್ ಬಿಎಸ್​ಡಬ್ಲ್ಯೂ ಪದವೀಧರ ಹಾಗೂ ಅಂತಾರಾಜ್ಯ ಮಟ್ಟದ ಕ್ರಿಕೆಟ್ ಕ್ರೀಡಾಪಟು. ಸುಶಿಕ್ಷಿತ ಯುವಕರ ಕೈಗೆ ಅಧಿಕಾರ ನೀಡಿದಾಗ ಗ್ರಾಮದ ಅಭ್ಯುದಯ ಸಾಧ್ಯ ಎಂಬ ಆಶಯದಂತೆ ಸ್ಥಳೀಯರ ಪ್ರೋತ್ಸಾಹದಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಯಿತು. ‘ವಾರ್ಡ್ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಶ್ವಾಸವಿದ್ದ ಕಾರಣ, ಊರವರು ಮತದಾನ ಮಾಡಿ ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ ಭರತ್.

    ಕ್ರಿಕೆಟ್ ಆಟಗಾರ: ಭರತ್ ಕೆ.ವಿ. ಅಂತಾರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ. ಇಂಡಿಯನ್ 2020 ಕ್ರಿಕೆಟ್ ಅಕಾಡೆಮಿಯ ಮೂಲಕ ಭರತ್ ಕೆ.ವಿ. ರಾಜಸ್ಥಾನ, ಜೈಪುರ, ಹೈದರಾಬಾದ್, ಮಧ್ಯಪ್ರದೇಶ ಮೊದಲಾದ ಕಡೆಗಳಲ್ಲಿ ನಡೆದ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಬ್ಯಾಟ್ಸ್​ಮನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಸಮಾಜಕಾರ್ಯ ಪದವಿ ಪೂರೈಸಿರುವುದು ಭರತ್​ಗೆ ಗ್ರಾಪಂ ಸದಸ್ಯನಾಗಿ ಸಮಾಜಸೇವೆ ಮಾಡಲು ಪೂರಕವಾಗಿದೆ.

    ಪೇಟೆ ತೊರೆದು ಹಳ್ಳಿಗೆ ಬಂದು ಗೆದ್ದರು!

    ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ, ಕರೊನಾ ಲಾಕ್​ಡೌನ್ ವೇಳೆ ಹಳ್ಳಿ ಸೇರಿದ್ದ ಯುವಕ ಈಗ ಗ್ರಾಮ ಪಂಚಾಯ್ತಿ ಸದಸ್ಯ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಪಂ ಕನ್ನಸಂದ್ರದ (ಸಾಮಾನ್ಯ ಕ್ಷೇತ್ರ) ಶಿವರಂಜನ್ (29) ಗ್ರಾಮದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅಲ್ಲದೆ ತಂದೆ ನೀರುಗಂಟಿಯಾಗಿದ್ದ ಗ್ರಾಪಂನಲ್ಲಿ ಸದಸ್ಯನಾಗಿರುವುದು ವಿಶೇಷ.

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಶಿವರಂಜನ್​

    ಬಿಎಸ್ಸಿ ಮತ್ತು ಬಿಸಿಎ ಪದವಿ ಪಡೆದು, ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು ಕರೊನಾ ಸೃಷ್ಟಿಸಿದ ಪರಿಸ್ಥಿತಿಯಿಂದ ಹಳ್ಳಿ ಸೇರಿದರು. ಗ್ರಾಮದಲ್ಲಿ ಪ್ರತಿಯೊಂದಕ್ಕೂ ನಡೆಯುತ್ತಿದ್ದ ರಾಜಕೀಯ ಕಂಡು ಘಾಸಿಗೊಂಡ ಶಿವರಂಜನ್, ಗ್ರಾಮದ ಎಂಪಿಸಿಎಸ್ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅರ್ಹತೆ ಇದ್ದರೂ ರಾಜಕೀಯ ಕಾರಣಗಳಿಂದ ಹುದ್ದೆ ಲಭಿಸಲಿಲ್ಲ. ‘ಗ್ರಾಮದಲ್ಲಿ ಸಾಕಷ್ಟು ಮಂದಿ ವಿದ್ಯಾವಂತರಿದ್ದರೂ, ಯಾರಿಗೂ ಯಾವ ಪ್ರಯೋಜನವಿರಲಿಲ್ಲ. ಗ್ರಾಪಂನ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪುತ್ತಿರಲಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡಲಾಗುತ್ತಿತ್ತು. ಈ ಎಲ್ಲ ಕಾರಣಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಜನತೆಯೂ ಆಶೀರ್ವದಿಸಿದರು’ ಎಂದು ಅನುಭವ ಹಂಚಿಕೊಂಡರು ಶಿವರಂಜನ್.

    ಗ್ರಾಮದ ಸಮಗ್ರ ಅಭಿವೃದ್ಧಿಗೆ ನರೇಗಾ ಹಾಗೂ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವುದು ನನ್ನ ಮೊದಲ ಉದ್ದೇಶ. ಜಮೀನು ಹೊಂದಿರುವ ರೈತರಿಗೆ ಯಾವ ಪಕ್ಷಪಾತವಿಲ್ಲದೆ ನರೇಗಾ ಸವಲತ್ತುಗಳನ್ನು ತಲುಪಿಸುವೆ. ಕೊಟ್ಟ ಅಧಿಕಾರವನ್ನು ಜನಹಿತಕ್ಕಾಗಿ ಬಳಸುತ್ತೇನೆ.

    | ಶಿವರಂಜನ್

    ಸ್ವಚ್ಛ, ಸುಂದರ ಗ್ರಾಮದ ಸಂಕಲ್ಪ

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
    ಪ್ರೀತಿ ಎಂ.ಕೆ.

    ‘ಹಳ್ಳಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಅವರ ಆಸಕ್ತಿ ಯಾವ ಕಡೆಗಿದೆ ಎಂಬುದನ್ನು ಗಮನಿಸಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಜ್ಞಾನದ ಮಟ್ಟ ವಿಸ್ತಾರಗೊಂಡಾಗ ಸಮುದಾಯದ ಏಳಿಗೆಯಾಗುತ್ತದೆ, ಆ ಮೂಲಕ ಗ್ರಾಮಗಳ ಅಭಿವೃದ್ಧಿಯನ್ನೂ ಸಾಧಿಸಬಹುದು’. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ, ಮುಸ್ಸೇನಾಳ್ ಗ್ರಾಮದ 25ರ ಯುವತಿ ಪ್ರೀತಿ ಎಂ.ಕೆ. ಅವರ ಅಭಿವೃದ್ಧಿಯ ಪರಿಕಲ್ಪನೆಯಿದು. ಕುಗ್ರಾಮದ, ಅನಕ್ಷರಸ್ಥ ರೈತ ಕುಟುಂಬದಿಂದ ಬಂದಿರುವ ಪ್ರೀತಿ ರಾಜಕೀಯಕ್ಕೆ ಪ್ರವೇಶ ಪಡೆಯಲು ತಂದೆ ಕಾಮೇಶ್ ನಾಯ್ಕ ಅವರೇ ಪ್ರೇರಣೆಯಂತೆ. ಗ್ರಾಪಂ ಚುನಾವಣೆಯಲ್ಲಿ ಎರಡು ಬಾರಿ ಸೋತು, ಮೂರನೇ ಬಾರಿಗೆ ಕೇವಲ ಒಂದು ಮತದ ಅಂತರದಿಂದ ಗೆದ್ದಿದ್ದ ಕಾಮೇಶ್ ನಾಯ್ಕ ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದರು.

    ಪ್ರೀತಿ ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕವಂತೆ. ಅವರ ತಾಯಿ ತನಗೆ ಸಹಿ ಮಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ದೂರ ಸರಿದಾಗ, ಮಗಳನ್ನೇ ಏಕೆ ನಿಲ್ಲಿಸಬಾರದು ಎಂದುಕೊಂಡರು. ಆಗ ಪ್ರೀತಿ ಬೆಂಗಳೂರಿನಿಂದ ಬಂದು ನಾಮಪತ್ರ ಸಲ್ಲಿಸಿದರು. ಶಿವಮೊಗ್ಗದಲ್ಲಿ ಪಿಯುಸಿ, ಬಿಬಿಎಂ ಪದವಿ ಪಡೆದು, ಬೆಂಗಳೂರಿನಲ್ಲಿ ಎಂಬಿಎ (ಮಾರ್ಕೆಟಿಂಗ್) ಮಾಡಿದ ಪ್ರೀತಿ, ಆರೋಗ್ಯ ವಿಮೆ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಸಮಾಜಸೇವೆಗೆ ಅಡಚಣೆಯಾದರೆ ಬೆಂಗಳೂರಿನ ಉದ್ಯೋಗಕ್ಕೆ ರಾಜೀನಾಮೆ ನೀಡುವ ಆಲೋಚನೆ ಹೊಂದಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು ಮಕ್ಕಳ ಹಾಜರಾತಿ ಕಡಿಮೆಯಿದೆ. ಸಮೀಪದ ಕಾನ್ವೆಂಟ್ ಶಾಲೆಗೆ ಕಳಿಸುವ ಪಾಲಕರೇ ಹೆಚ್ಚು. ಈ ಪರಿಸ್ಥಿತಿ ಬದಲಿಸಬೇಕು. ಊರಿನ ಶಾಲೆಯನ್ನೇ ಸುಧಾರಿಸಿ ಮಕ್ಕಳೆಲ್ಲ ಅಲ್ಲೇ ಓದುವಂತೆ ಮಾಡುವ ವಿಚಾರ ಅವರದು. ಗ್ರಂಥಾಲಯ ನಿರ್ವಣ, ಸ್ವಚ್ಛತೆಯ ಅರಿವು ಮೂಡಿಸುವುದು, ಪ್ರಥಮ ಚಿಕಿತ್ಸೆ, ವಿಟಮಿನ್ ಮಾತ್ರೆಗಳ ವ್ಯವಸ್ಥೆ ಮಾಡಿ ಜನರ ಆರೋಗ್ಯ ಕಾಪಾಡಬೇಕು ಎನ್ನುತ್ತಾರೆ.

    ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts