ನವದೆಹಲಿ: ಲೋಕಸಬೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಒಬ್ಬರಿಂದ ಲಂಚ ಪಡೆದಿರುವ ಆರೋಪವನ್ನು ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಲೋಕಪಾಲ್ ನಿರ್ದೇಶನದ ಮೇರೆಗೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಪ್ರಶ್ನೆ ಕೇಳಲು ಉದ್ಯಮಿ ಒಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಲೋಕಪಾಲ್ಗೆ ದೂರು ಸಲ್ಲಿಸಿದ್ದರು. ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ಲೋಕಪಾಲ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಆದೇಶಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದೆ ಮಹುವಾ ಮೊಯಿತ್ರಾ ಟಾಮ್ ಡ್ಯುವೋ ಅವರ ಸರ್ಕಾರವು ನನ್ನ ಪ್ರಯಾಣದ ವಿವರಗಳನ್ನು ಪಡೆಯಲು ಟ್ರಾವೆಲ್ ಏಜೆಂಟರಿಗೆ ಕರೆ ಮಾಡಿ ಬೆದರಿಸುತ್ತಿದೆ. ಸಾಹಿಬ್ ಮತ್ತು ಮೋಟಾ ಬಾಯಿ ಗುಜರಾತ್ನಲ್ಲಿ ಮಹಿಳೆಯರನ್ನು ಹಿಂಬಾಲಿಸಲು ಶುರು ಮಾಡಿದ ಈಗಲೂ ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದೆಯ ವಿಚಾರಣೆ ನಡೆಸಿರುವ ಲೋಕಪಾಲ್ ಮಹುವಾರನ್ನು ಸಂಸತ್ ಸದಸ್ಯತ್ವದಿಂದ ಉಚ್ಛಾಟಿಸುವಂತೆ ಶಿಫಾರಸ್ಸು ಮಾಡಿದೆ. ಆದರೆ, ಲೋಕಪಾಲ್ ಶಿಫಾರಸ್ಸನ್ನು ತಳ್ಳಿಹಾಕಿರುವ ವಿಪಕ್ಷ ಸಂಸದರು ಇದು ಪೂರ್ವನಿಯೋಜಿತ ಎಂದು ಆರೋಪಿಸಿ ಕಿಡಿಕಾರಿದ್ದಾರೆ.