ನವದೆಹಲಿ: ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರದಂದು (ಫೆ.9) ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (Reliance Communications Ltd.) ಷೇರುಗಳ ಬೆಲೆ 4.70% ಏರಿಕೆಯಾಗಿ 2.45 ರೂಪಾಯಿ ತಲುಪಿತು. ಅನಿಲ್ ಅಂಬಾನಿ ಅವರ ದಿವಾಳಿ ಕಂಪನಿಯಾದ ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರುಗಳ ಬೆಲೆ ಈಗ ರಾಕೆಟ್ ತರಹದಲ್ಲಿ ಏರಿಕೆ ಕಂಡಿದೆ.
ಕಂಪನಿಗೆ ಸಂಬಂಧಿಸಿದ ಕೆಲವು ಸುದ್ದಿಗಳಿಂದಾಗಿ ಈ ಷೇರುಗಳಲ್ಲಿ ಸಕಾರಾತ್ಮಕ ಚಲನೆ ಬಂದಿದೆ. ಅದರಲ್ಲೂ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದ ಪರಿಣಾಮವು ಸ್ಟಾಕ್‌ನಲ್ಲಿ ಕಂಡಬರುತ್ತಿದೆ.
ವಾಸ್ತವವಾಗಿ, 96,317.65 ಕೋಟಿ ರೂಪಾಯಿ ಮೂಲ ಬೆಲೆಗೆ ಮೊಬೈಲ್ಫೋನ್ ಸೇವೆಗಳಿಗಾಗಿ ಎಂಟು ಸ್ಪೆಕ್ಟ್ರಮ್ ಬ್ಯಾಂಡ್‌ಗಳಲ್ಲಿ (ತರಂಗಾಂತರ) ಹರಾಜನ್ನು ಸರ್ಕಾರ ಅನುಮೋದಿಸಿದೆ.
ದಿವಾಳಿಯಾಗಿರುವ ಕೆಲವು ಟೆಲಿಕಾಂ ಕಂಪನಿಗಳು ಹೊಂದಿರುವ ಸ್ಪೆಕ್ಟ್ರಮ್ ಅನ್ನು ಸಹ ಈ ಹರಾಜಿನಲ್ಲಿ ಮಾರಾಟಕ್ಕೆ ಇಡಲಾಗುವುದು. ಈ ಸ್ಪೆಕ್ಟ್ರಮ್ಗಳ ಅವಧಿಯು ಈ ವರ್ಷ ಮುಗಿಯುತ್ತಿದೆ. ಏತನ್ಮಧ್ಯೆ, ರಿಲಯನ್ಸ್ ಕಮ್ಯುನಿಕೇಶನ್‌ನ ಸಾಲಗಾರರ ಸಮಿತಿಯ (ಸಿಒಸಿ) ಸಭೆ ಶುಕ್ರವಾರ ನಡೆಯಿತು. ಕಂಪನಿಯಿಂದ ನೀಡಿದ ಮಾಹಿತಿ ಪ್ರಕಾರ, ಇದು ಸಿಒಸಿಯ 45 ನೇ ಸಭೆಯಾಗಿದೆ.
ಫೆ. 10ರಂದು ಆಡಳಿತ ಮಂಡಳಿಯ ಸಭೆ ಇದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು 10 ಫೆಬ್ರವರಿ 2024 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಬಿಎಸ್ಇಗೆ ಕಂಪನಿಯು ತಿಳಿಸಿತ್ತು. ಈ ಸಭೆಯಲ್ಲಿ ಕಂಪನಿಯ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳು ಮತ್ತು ಇತರ ವಿಷಯಗಳ ಜೊತೆಗೆ ವಿವರಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಒಂಬತ್ತು ತಿಂಗಳ ಫಲಿತಾಂಶಗಳನ್ನು ಸಹ ಒಳಗೊಂಡಿರುತ್ತದೆ.
ವಾರದ ಕೊನೆಯ ವಹಿವಾಟಿನ ದಿನದಂದು, ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರುಗಳು 4.70% ಏರಿಕೆಯಾಗಿ 2.45 ರೂ. ತಲುಪಿವೆ. ಈ ವಾರ ಷೇರುಗಳು ಹೂಡಿಕೆದಾರರಿಗೆ ನಿರಂತರ ಲಾಭ ನೀಡಿವೆ. ಕಳೆದ ಒಂದು ವಾರದಲ್ಲಿ ಈ ಷೇರಿನ ಬೆಲೆ 18.92% ರಷ್ಟು ಹೆಚ್ಚಾಗಿದೆ.
ಡಿಸೆಂಬರ್ 13, 2023 ರಂದು ಷೇರಿನ ಬೆಲೆಯು ರೂ 2.49 ಆಗಿತ್ತು, ಇದು 52 ವಾರಗಳ ಗರಿಷ್ಠವಾಗಿದೆ. 2008ರಲ್ಲಿ ಈ ಷೇರು 700 ರೂ.ಗಿಂತ ಹೆಚ್ಚು ವಹಿವಾಟು ನಡೆಸುತ್ತಿತ್ತು. ಅದರಂತೆ ಶೇ. 99ಕ್ಕೂ ಹೆಚ್ಚು ನಷ್ಟ ಅನುಭವಿಸಿದೆ. ಈ ಕಂಪನಿಯಲ್ಲಿ ಪ್ರವರ್ತಕ ಅನಿಲ್ ಅಂಬಾನಿ ಕುಟುಂಬವು ಶೇಕಡಾ 2 ಕ್ಕಿಂತ ಕಡಿಮೆ ಪಾಲನ್ನು ಹೊಂದಿದೆ.