ನವದೆಹಲಿ: ಕೋವಿಡ್-ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಹಿವಾಟು ಕ್ಷೇತ್ರಗಳಿಗೆ ಕೇಂದ್ರ ಸರ್ಕಾರವು ಆರ್ಥಿಕ ಚೈತನ್ಯ ತುಂಬಲು ಮುಂದಾಗಿದ್ದು, ಆ ಕುರಿತು ಇಂದಿನ ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಈ ಸಭೆಯಲ್ಲಿ ಕೋವಿಡ್ ಬಾಧಿತ ಕ್ಷೇತ್ರಗಳಿಗೆ ಖಚಿತವಾಗಿ ಸಾಲ ಒದಗಿಸುವ ಯೋಜನೆಯನ್ನು ಪ್ರಕಟಿಸಲಾಗಿದೆ. ಲೋನ್ ಗ್ಯಾರಂಟಿ ಸ್ಕೀಮ್ ಫಾರ್ ಕೋವಿಡ್ ಅಫೆಕ್ಟೆಡ್ ಸೆಕ್ಟರ್ಸ್ (ಎಲ್ಜಿಎಸ್ಸಿಎಎಸ್) ಎಂಬ ಶೀರ್ಷಿಕೆಯಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿದ್ದು, ಇದಕ್ಕೆಂದೇ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂಪಾಯಿ ಒದಗಿಸಲಿದೆ. ಇದು ಆರೋಗ್ಯ ಮತ್ತು ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರಗಳಿಗೆ ಅನ್ವಯಿಸಲಿದೆ ಎನ್ನಲಾಗಿದೆ. ಇದು 2022ರ ಮಾರ್ಚ್ 31ರ ವರೆಗೆ ಮಂಜೂರಾಗುವ ಎಲ್ಲ ಅರ್ಹ ಸಾಲಗಳಿಗೆ ಅಥವಾ ಈ ಮೊತ್ತ 50 ಸಾವಿರ ಕೋಟಿ ರೂ. ತಲುಪುವವರೆಗೆ ಅನ್ವಯಿಸಲಿದೆ. ಇವೆರಡರಲ್ಲಿ ಯಾವುದು ಬೇಗ ಅನ್ವಯಿಸಲಿರುವುದೋ ಅದನ್ನು ಪರಿಗಣಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇನ್ನು ಇತರ ಕ್ಷೇತ್ರಗಳಿಗೂ ಹೊಸ ನೀತಿ ಹೊರಡಿಸಲು ಸರ್ಕಾರ ಚಿಂತನೆ ಹೊಂದಿದ್ದು, ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಅವಲೋಕಿಸಿ ಸ್ಪಷ್ಟತೆ ತಳೆದು ಪ್ರಕಟಿಸಲಿದೆ. ಜತೆಗೆ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್ಜಿಎಸ್) ಅಡಇ 1.5 ಲಕ್ಷ ಕೋಟಿ ರೂಪಾಯಿಯನ್ನು ಸರ್ಕಾರ ಒದಗಿಸಲಿದೆ. ಇದು ಗ್ಯಾರಂಟಿ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ಅಡಿ 2021ರ ಸೆ. 30ರ ವರೆಗೆ ನೀಡಲಾಗುವ ಎಲ್ಲ ಸಾಲ ಅಥವಾ 4.5 ಲಕ್ಷ ಕೋಟಿ ರೂ. ಸಾಲದ ಮೊತ್ತ, ಇವೆರಡರಲ್ಲಿ ಯಾವುದು ಬೇಗ ಅನ್ವಯಿಸಲಿದೆಯೋ ಅದನ್ನು ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)