ನ್ಯೂಸ್

ಶೆಟ್ಟರ್ ಅವರನ್ನು ಮನೆಗೆ ಕಳಿಸುವುದೇ ನನ್ನ ಉದ್ದೇಶ; ಸೋತ ಅವರ ಸಮ್ಮುಖದಲ್ಲೇ ವಿಜಯೋತ್ಸವ ಮಾಡೋಣ: ಬಿಎಸ್​ವೈ

ಹುಬ್ಬಳ್ಳಿ: ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷವನ್ನು ತೊರೆದು ಕಾಂಗ್ರೆಸ್​ಗೆ ಸೇರ್ಪಡೆ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ನಿನ್ನೆ ಹರಿಹಾಯ್ದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕೂಡ ಶೆಟ್ಟರ್ ವಿರುದ್ಧ ಗುಡುಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ವಿರುದ್ಧ ಆರ್ಭಟಿಸಿದ್ದಾರೆ. ಜಗದೀಶ ಶೆಟ್ಟರ್ ನಂಬಿಕೆ ಮತ್ತು ವಿಶ್ವಾಸದ್ರೋಹ ಮಾಡಿದ್ದಾರೆ. ಅಮಿತ್ ಷಾ ಮಾತನಾಡಿದ್ದರೂ ವಿಶ್ವಾಸದ್ರೋಹ ಮಾಡಿ ಹೊರಟು ಹೋಗಿದ್ದಾರೆ. ಪಕ್ಷದ ಬೆನ್ನಿಗೆ ಚೂರಿ ಹಾಕಿದ ಅವರು ಜೀವನದಲ್ಲಿ ಮರೆಯಲಾಗದ ಸೋಲನ್ನು ಅನುಭವಿಸುತ್ತಾರೆ ಎಂದ ಯಡಿಯೂರಪ್ಪ, ಜಗದೀಶ ಶೆಟ್ಟರ್ ದ್ರೋಹ ಮಾಡಿರುವ ಬಗ್ಗೆ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದೂ ಹೇಳಿದರು.

ಇನ್ನೂ ಹತ್ತು-ಹನ್ನೆರಡು ದಿನಗಳ ಕಾಲ ಜಗದೀಶ ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದರ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಶೆಟ್ಟರ್ ಅವರನ್ನು ಈ ಬಾರಿಗೆ ಮನೆಗೆ ‌ಕಳುಹಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿಯನ್ನು 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಇಷ್ಟು ದೊಡ್ಡಮಟ್ಟದಲ್ಲಿ ಜನರು ಸೇರಿದ್ದು ನೋಡಿದರೆ ನನಗೆ ವಿಶ್ವಾಸ ಬಂದಿದೆ. ನಮಗೆ ದ್ರೋಹ ಮಾಡಿದ ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಮನೆಗೆ ಹೋಗುತ್ತಾರೆ ಎಂದು ಬಿಎಸ್​ವೈ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋತ ಸವದಿಯನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ‌ ಮಾಡಿದ್ದೇ ನಾನು. ಅವನು ನನಗೆ ದ್ರೋಹ ಮಾಡಿದ್ದಾನೆ, ಇನ್ನು ಜಗದೀಶ್ ಶೆಟ್ಟರ್ ಕಥೆ ಬೇರೆ. ಯಾರೂ ಶೆಟ್ಟರ್ ಜತೆಗೆ ಓಡಾಡಬೇಡಿ. ನನಗೆ ಈಗ 80 ವರ್ಷ, ನಾನು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನು ಈಗ ಇಲ್ಲಿಗೆ ಬಂದಿರುವ ಉದ್ದೇಶ ಶೆಟ್ಟರ್ ಅವರನ್ನ ಮನಗೆ ಕಳುಹಿಸಲಿಕ್ಕೆ‌ ಎಂದು ಬಿಎಸ್​ವೈ ಹೇಳಿದ್ದಾರೆ.

ನಾನು ನರೇಂದ್ರ ಮೋದಿ ಮತ್ತು ಅಮಿತ್ ಷಾಗೆ ಮಾತು ಕೊಟ್ಟು ಬಂದಿದ್ದೇನೆ. 150 ಸ್ಥಾನದಲ್ಲಿ ಗೆದ್ದು ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರುತ್ತೇನೆ ಎಂದು ಎಂದು ಮಾತು ಕೊಟ್ಟಿದ್ದೇನೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಚುನಾವಣೆ ಮುಗಿದ ಬಳಿಕ‌ ಇದೇ ಜಾಗದಲ್ಲಿ ಜಗದೀಶ ಶೆಟ್ಟರ್ ಸಮ್ಮುಖದಲ್ಲೇ 1 ಲಕ್ಷ ಜನರನ್ನ ಸೇರಿಸಿ ವಿಜಯೋತ್ಸವ ಮಾಡೋಣ ಎಂದು ಯಡಿಯೂರಪ್ಪ ಹೇಳಿದರು.