Marriage Cancel : ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹ ಎಂಬುದು ಬಹಳ ಮಹತ್ವದ ಘಟ್ಟ, ಹೊಸ ಬದುಕಿಗೆ ಮತ್ತೊಂದು ಹೊಸ ತಿರುವು ಎಂದೇ ಹೇಳಬಹುದು. ಇಂತಹ ಘಳಿಗೆಗೆ ಅದೆಷ್ಟೋ ವರ್ಷಗಳಿಂದ ಕಾಯುವ ಕುಟುಂಬಸ್ಥರಿಗೆ ತಮ್ಮ ಮಕ್ಕಳು ಅದ್ದೂರಿಯಾಗಿ ಮದುವೆಯಾಗಿ, ಸುಖಕರ ಜೀವನ ನಡೆಸಲಿ ಎಂದು ಆಶಿಸುತ್ತಿರುತ್ತಾರೆ. ಆದ್ರೆ, ಇದೇ ಮರೆಯಲಾಗದ ಘಟನೆಯಾದರೆ ಅರಗಿಸಿಕೊಳ್ಳುವುದು ಬಲುಕಷ್ಟ. ಅಂತಹದ್ದೇ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದೆ.
ಮದುವೆಗೆ ಹುಡುಗ-ಹುಡುಗಿಯ ಒಪ್ಪಿಗೆ ಪಡೆದು, ಕಂಕಣ ನಿಶ್ಚಯಿಸಿ, ಮದುವೆ ಆಮಂತ್ರಣವನ್ನು ಊರಿನವರಿಗೆ, ಸಂಬಂಧಿಕರಿಗೆ ಹಂಚಿ, ಆ ದಿನಕ್ಕಾಗಿ ಭಾರೀ ದಿನಗಳಿಂದ ಶ್ರಮಿಸಿ, ತಯಾರಿ ಮಾಡಿಕೊಳ್ಳುವ ವಧು-ವರನ ಕುಟುಂಬಕ್ಕೆ ದಿಢೀರ್ ಎಂದು ಮದುವೆ ನಿಂತು ಹೋದರೆ ಎಂತಹ ಆಘಾತ ಎದುರಾಗಬಹುದು? ಇಲ್ಲಿಯೂ ಕೂಡ ಯುವತಿಯೊಬ್ಬಳು ಇದೇ ರೀತಿ ಶುಭ ಘಳಿಗೆಯಲ್ಲಿ ಎಡವಟ್ಟು ಮಾಡಿದ್ದು, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ನನಗೆ ಈ ವರ ಬೇಡವೆಂದು ಹೇಳಿ, ಸ್ಥಳದಿಂದ ಎದ್ದು ನಡೆದಿದ್ದಾಳೆ. ಇದು ವರನ ಕುಟುಂಬಸ್ಥರಿಗೆ ಭಾರೀ ಅಚ್ಚರಿ ಮೂಡಿಸಿತು.
ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬರುಚಾಬಾದ್ ಜಿಲ್ಲೆಯ ಯುವತಿಗು ಮತ್ತು ಛತ್ತೀಸ್‌ಗಢದ ಬಲರಾಮ್‌ಪುರದ ಇಂಜಿನಿಯರ್ಗು ನಿಶ್ಚಿತಾರ್ಥ ನೆರವೇರಿತ್ತು. ತಾನು ಇಂಜಿನಿಯರ್ ಆಗಿದ್ದು ತಿಂಗಳಿಗೆ 1.2 ಲಕ್ಷ ರೂ. ವೇತನ ಪಡೆಯುತ್ತಿದ್ದೇನೆ ಎಂದು ವರ ಹೇಳಿದ್ದ. ಅಲ್ಲದೆ, ವರನ ಕುಟುಂಬದ ಬಳಿಕ ಎಕರೆಗಟ್ಟಲೆ ಜಮೀನು ಕೂಡ ಇದೆ. ಇದಾದ ಬಳಿಕ ವಧು ಮದುವೆಗೆ ಒಪ್ಪಿಗೆ ಸೂಚಿಸಿದ್ದಳು. ಬಳಿಕ ಮದುವೆಗೆ ಬೇಕಾದ ಎಲ್ಲ ಸಿದ್ಧೆತೆಯು ನಡೆದಿತ್ತು.
ವರ, ಸರ್ಕಾರಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಖಾಸಗಿ ಕಂಪನಿಯಲ್ಲಿ 1.2 ಮಾಸಿಕ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಮದುವೆಯ ದಿನ ವಧುವಿಗೆ ಗೊತ್ತಾಗಿದೆ. ಮದುವೆಯ ಹಾರವನ್ನು ಬದಲಾಯಿಸುವಾಗಲೇ ತನಗೆ ಮದುವೆ ಬೇಡ ಎಂದು ವಧು ವಿವಾಹವನ್ನೇ ರದ್ದುಗೊಳಿಸಿದ್ದಾಳೆ. ಎರಡೂ ಕುಟುಂಬವರೂ ವಧುವಿನ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅದು ಫಲ ನೀಡಲಿಲ್ಲ. ಅಂತಿಮವಾಗಿ ವಧು ಮದುವೆ ಬೇಡ ಎಂದು ನಿರ್ಧರಿಸಿದಳು.
ಅಚ್ಚರಿ ಏನೆಂದರೆ, ವಧುವಿನೊಂದಿಗೆ ಚರ್ಚಿಸುವ ಸಂದರ್ಭದಲ್ಲಿ ವರನ ಕುಟುಂಬವು ಸಂಬಳದ ಸ್ಲಿಪ್‌ಗಳನ್ನು ಸಹ ಪಡೆದುಕೊಂಡು, ವಧುವಿಗೆ ನೀಡಿ, ವಿನಂತಿ ಮಾಡಿಕೊಂಡರೂ ಆಕೆಯ ಮನಸ್ಸು ಕರಗಲಿಲ್ಲ. ವಧು ದೃಢವಾಗಿ ತನ್ನ ನಿಲುವಿಗೆ ಅಂಟಿಕೊಂಡಳು. ಅಂತಿಮವಾಗಿ ಎರಡೂ ಕುಟುಂಬಗಳು ಚರ್ಚಿಸಿ ಮದುವೆ ವೆಚ್ಚವನ್ನು ಪರಿಹರಿಸಲು ನಿರ್ಧರಿಸಿದರು. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
ಖಾಸಗಿ ವಲಯಕ್ಕೆ ಹೋಲಿಸಿದರೆ ಹೆಚ್ಚು ಸ್ಥಿರತೆ ಮತ್ತು ಉದ್ಯೋಗ ಭದ್ರತೆಯನ್ನು ನೀಡುವುದರಿಂದ ಸರ್ಕಾರಿ ಉದ್ಯೋಗಗಳು ಭಾರತದಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. (ಏಜೆನ್ಸೀಸ್)