ನವಜಾತ ಶಿಶುವನ್ನು ಟಾಯ್ಲೆಟ್​ನಲ್ಲಿ Flush ಮಾಡಿದ ದುಷ್ಟರು; ರಾಜ್ಯದಲ್ಲಿ ಅಮಾನವೀಯ ಘಟನೆ

baby
Published on

ರಾಮನಗರ: ಆಗ ತಾನೆ ಜನಿಸಿರುವ ಶಿಶುವನ್ನು ದುರುಳರು ಶೌಚಾಲಯ ಕಮೋಡ್​ನಲ್ಲಿ ಹಾಕಿ ಫ್ಲಶ್​ (Flush) ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿರುವ ದಯಾನಂದ ಸಾಗರ ಆಸ್ಪತ್ರೆಯಲ್ಲಿ ನಡೆದಿದೆ.

ಘಟನೆ ಸಂಬಂಧ ಆಸ್ಪತ್ರೆ ಸಿಬ್ಬಂದಿ ಹಾರೋಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮಗು ಶವದ ಡಿಎನ್ಎ ಪರೀಕ್ಷೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

New Born

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer), ಹಾರೋಹಳ್ಳಿ ಸಮೀಪದ ದಯಾನಂದ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ನವಜಾತ ಶಿಶುವನ್ನ ಟಾಯ್ಲೆಟ್ ಕಮೋಡ್​ನಲ್ಲಿ ಹಾಕಿ ಫ್ಲಶ್​ ಮಾಡಲಾಗಿದೆ.  ಶವ ಪೈಪ್ ನಲ್ಲಿ ಸಿಲುಕಿಕೊಂಡು ಆಸ್ಪತ್ರೆಯ ಡ್ರೈನೇಜ್​ ಬ್ಲಾಕ್​ ಆಗಿದ್ದು, ಪರಿಶೀಲನೆ ನಡೆಸಿದಾಗ ಶೌಚಗುಂಡಿಯಲ್ಲಿ ಗಂಡು ಮಗುವಿನ ಶವ ಪತ್ತೆಯಾಗಿದೆ.

ಕೂಡಲೇ ಈ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮಗು ಜನನ ಮರೆಮಾಚಲು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಮಗು ಶವದ ಡಿಎನ್ಎ ಪರೀಕ್ಷೆ ನಡೆಸಿ ಆರೋಪಿಗಳ ಪತ್ತೆ ಹಚ್ಚಲಾಗುವುದು. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಡಿಎನ್ಎ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net