

Metal detector : ನಿಧಿ ಶೋಧಕ್ಕೆ ( Treasure Hunting ) ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅನೇಕರು ಮೆಟಲ್ ಡಿಟೆಕ್ಟರ್ ಬಳಸಿ ಚಿನ್ನ ಮತ್ತು ವಜ್ರಗಳಂತಹ ಬೆಲೆಬಾಳುವ ವಸ್ತುಗಳನ್ನು ಹುಡುಕುತ್ತಾರೆ. ಕೆಲವೊಮ್ಮೆ ವಿಚಿತ್ರ ವಸ್ತುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದ್ದೂ ಉಂಟು.
ಮೆಟಲ್ ಡಿಟೆಕ್ಟರ್ ಉಪಕರಣಗಳನ್ನು ಬಳಸಿಕೊಂಡು ಅಮೂಲ್ಯವಾದ ಸಂಪತ್ತನ್ನು ಪತ್ತೆಹಚ್ಚಿದ್ದೇವೆ ಎಂದು ಅನೇಕರು ಹೇಳಿಕೊಳ್ಳುತ್ತಾರೆ. ಆದರೆ, ಅಂತಹ ವಿಡಿಯೋಗಳಲ್ಲಿ ಹೆಚ್ಚಿನವು ನಿಜವಲ್ಲ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ನಿಧಿ ಶೋಧದ ವಿಡಿಯೋಗಳನ್ನು ಅನೇಕ ಜನರು ಇಷ್ಟಪಡುತ್ತಾರೆ ಮತ್ತು ಅವು ತ್ವರಿತವಾಗಿ ವೈರಲ್ ಆಗಿದ್ದೂ ಉಂಟು. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಅಂಥದ್ದೊಂದು ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಡಲತೀರದಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಮರಳಿನ ಮೇಲೆ ಏನೋ ಹುಡುಕುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಡಿಟೆಕ್ಟರ್ ಒಂದು ಸ್ಥಳದಲ್ಲಿ ಡಿಂಗ್ ಡಿಂಗ್ ಎಂದು ಶಬ್ದವನ್ನು ಮಾಡುತ್ತದೆ. ಬಳಿಕ ಅಲ್ಲಿ ಅಗೆದು ನೋಡಿದಾಗ ಚೂಪಾದ ಹಾಗೂ ಅಪಾಯಕಾರಿಯಾದ ಕಬ್ಬಿಣದ ತುಂಡು ಪತ್ತೆಯಾಗುತ್ತದೆ.
ಚೂಪಾದ ಕಬ್ಬಿಣದ ಮೇಲೆ ಯಾರಾದರೂ ಕಾಲಿಟ್ಟಿದ್ದರೆ ಗ್ಯಾರಂಟಿ ಚುಚ್ಚಿಕೊಳ್ಳುತ್ತಿತ್ತು ಮತ್ತು ಗಾಯವಾಗುತ್ತಿತ್ತು. ಆ ವ್ಯಕ್ತಿ ಕಬ್ಬಿಣದ ತುಂಡನ್ನು ಬಹಳ ಎಚ್ಚರಿಕೆಯಿಂದ ತೆಗೆಯುತ್ತಾರೆ. ಈ ವಿಡಿಯೋವನ್ನು ಕೆಲವೇ ದಿನಗಳಲ್ಲಿ 10 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಲಕ್ಷಗಟ್ಟಲೆ ಲೈಕ್‌ಗಳು ಮತ್ತು ಶೇರ್‌ಗಳು ಬಂದಿವೆ. ಆದರೆ ಈ ವಿಡಿಯೋ ನಿಜವೋ? ಅಥವಾ ನಕಲಿಯೋ? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಮರಳಿನಲ್ಲಿ ಸ್ವಲ್ಪ ಅಗೆದ ನಂತರ ಕಬ್ಬಿಣದ ಚೂಪಾದ ತುದಿಗಳು ಕಾಣುವ ಕಾರಣ ಅಲ್ಲಿ ಚೂಪಾದ ಕಬ್ಬಿಣದ ತುಂಡನ್ನು ಮೊದಲೇ ಬಚ್ಚಿಟ್ಟಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೆಲವರು "ಇದು ನಕಲಿ ವಿಡಿಯೋ" ಎಂದು ಕಾಮೆಂಟ್ ಮಾಡಿದ್ದಾರೆ ಮತ್ತು ಇನ್‌ಸ್ಟಾಗ್ರಾಂನಲ್ಲಿ ಲೈಕ್‌ಗಳನ್ನು ಪಡೆಯಲು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)