ನ್ಯೂಸ್

ಬ್ರೆಜಿಲ್ ಈಗ ಜಾಗತಿಕ ಮಟ್ಟದ ಕರೊನಾ ಹಾಟ್ ಸ್ಪಾಟ್!

ನವದೆಹಲಿ: ಕೋವಿಡ್-19 ಮಹಾಮಾರಿಗೆ 1,00,000ಕ್ಕೂ ಹೆಚ್ಚು ಬ್ರೆಜಿಲಿಯನ್ನರು ಸಾಯಬಹುದು...!

ದೇಶದಲ್ಲಿ ಕರೊನಾ ವೈರಾಣುವಿನ ವ್ಯಾಪಕತೆ ಹಾಗೂ ನಿತ್ಯವೂ ಏರುತ್ತಿರುವ ಸಾವಿನ ಪ್ರಮಾಣವನ್ನು ಅಧ್ಯಯನ ಮಾಡಿರುವ ಆರೋಗ್ಯ ತಜ್ಞರು ಇಂಥದ್ದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ. ವ್ಯಾಪಕ ಬಡತನ ಮತ್ತು ಸಾಮಾಜಿಕ ಅಸಮಾನತೆ ಕೂಡ ಕರೊನಾ ವೈರಾಣುವಿನ ಹರಡುವಿಕೆಗೆ ಕಾರಣವಾಗಿದೆ ಎಂದವರು ಆರೋಪಿಸಿದ್ದಾರೆ.

ಬ್ರೆಜಿಲ್ ಕರೊನಾ ಹಾಟ್​ಸ್ಪಾಟ್ ಆಗಿ ಬದಲಾಗುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ನಾವು ಅಮೆರಿಕಕ್ಕಾದ ಪರಿಸ್ಥಿತಿ ಎದುರಿಸಲಿದ್ದೇವೆ. ಕೆಲವೇ ದಿನಗಳಲ್ಲಿ ಸಾವಿನ ಪ್ರಮಾಣ 120,000ಕ್ಕೆ ತಲುಪಲಿದೆ ಎಂದು ಇಂಟರ್ ನ್ಯಾಷನಲ್ ಲಾಂಗೆವಿಟಿ ಸೆಂಟರ್ ಅಧ್ಯಕ್ಷ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾಜಿ ಅಧಿಕಾರಿ ಅಲೆಕ್ಸಾಂಡರ್ ಕಲಾಚ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ 19,000 ಬ್ರೆಜಿಲಿಯನ್ನರು ಸೋಂಕಿಗೆ ಬಲಿಯಾಗಿದ್ದರೆ, ದಿನಕ್ಕೆ ಅಂದಾಜು 9000-1000 ಮಂದಿಗೆ ಸೋಂಕು ತಗುಲುತ್ತಿರುವ ವರದಿಯಾಗುತ್ತಿದೆ. ಸದ್ಯ, 290,000ಕ್ಕಿಂತ ಹೆಚ್ಚು ಮಂದಿಗೆ ಸೋಂಕು ದೃಢವಾಗಿದ್ದು, ಕರೊನಾ ಕೇಸುಗಳಲ್ಲಿ ರಷ್ಯಾವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರುವ ಎಲ್ಲಾ ಲಕ್ಷಣಗಳಿವೆ.

ಸಾರ್ವಜನಿಕ ಸ್ಥಳಗಳನ್ನು ಮುಚ್ಚಿ, ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೂ, ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ. ಆಸ್ಪತ್ರೆಯ ಹಾಸಿಗೆಗಳ ಲಭ್ಯತೆ ವಿಸ್ತರಣೆ ಸೇರಿದಂತೆ ಈವರೆಗಿನ ಎಲ್ಲಾ ಪ್ರಯತ್ನಗಳ ನಡುವೆಯೂ ನಾವು ಸಾಕಷ್ಟು ವೈದ್ಯಕೀಯ ವ್ಯವಸ್ಥೆಯ ಕೊರತೆ ಎದುರಿಸುತ್ತಿದ್ದೇವೆ ಎಂದು ಸಾವೊ ಪೌಲೋ ನಗರದ ಮೇಯರ್ ಬ್ರೂನೋ ಕೋವಾಸ್ ಹೇಳಿದ್ದಾರೆ. ನಗರದ ಆರೋಗ್ಯ ಸೇವೆ ಎರಡು ವಾರಗಳಲ್ಲಿ ಕುಸಿಯಲಿದೆ ಎನ್ನುವುದು ಅವರ ಆತಂಕ.

ಕೋವಿಡ್ -19ನಿಂದಾಗಿ ಆಗಸ್ಟ್ ಆರಂಭದ ವೇಳೆಗೆ ಸುಮಾರು 90,000 ಬ್ರೆಜಿಲಿಯನ್ನರು ಮೃತಪಡಬಹದು ಎಂದು ಸ್ಥಳೀಯ ಅಧ್ಯಯನವು ಅಂದಾಜಿಸಿದೆ. ಆದಾಗ್ಯೂ, ಆ ಅಂಕಿ ಅಂಶವು ದೇಶೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ 1,93,000ಕ್ಕಿಂತ ಹೆಚ್ಚಾಗಬಹುದು ಎಂದು ಅದೇ ಅಧ್ಯಯನದಲ್ಲಿ ಹೇಳಲಾಗಿದೆ. ಕರೋನ ವೈರಸ್ ಬಿಕ್ಕಟ್ಟಿನ ಎಚ್ಚರಿಕೆಯ ಹೊರತಾಗಿಯೂ, ಅಧ್ಯಕ್ಷ ಜೈರ್ ಬೋಲ್ಸೊನಾರೊ ರೋಗದ ಗಂಭೀರತೆ ತಳ್ಳಿಹಾಕಿದ್ದು, ಬ್ರೆಜಿಲಿಯನ್ನರು ತಮ್ಮ ಕೆಲಸಗಳಿಗೆ ವಾಪಸಾಗಬೇಕು ಎಂದು ಉತ್ತೇಜಿಸುತ್ತಿದ್ದಾರೆ. ಇದು ವ್ಯಾಪಕ ಟೀಕೆಗೂ ಕಾರಣವಾಗಿದೆ. 211ಮಿಲಿಯನ್ ಜನಸಂಖ್ಯೆಯಲ್ಲಿ ಬ್ರೆಜಿಲ್​ನ 70 ಪ್ರತಿಶತದಷ್ಟು ಜನರು ಕರೋನಾ ಸೋಂಕಿಗೆ ತುತ್ತಾಗಲಿದ್ದಾರೆ. ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಬೋಲ್ಸೊನಾರೊ ಪುನರುಚ್ಚರಿಸಿದ್ದಾರೆ.

ಬೆಲ್ಜಿಯಂನಲ್ಲಿ ಅತ್ಯಧಿಕ ಸಾವಿನ ಪ್ರಮಾಣ

ಬೆಲ್ಜಿಯಂನಲ್ಲಿ ಕರೊನಾ ವೈರಸ್ ಮೊದಲ ಕೇಸು ಪತ್ತೆಯಾಗಿದ್ದು ಫೆಬ್ರವರಿ 4, 2020ರಂದು. ಚೀನಾದ ವುಹಾನ್ ನಿಂದ ಬ್ರುಸೆಲ್ಸ್ ಗೆ ಕಳುಹಿಸಿಕೊಡಲಾಗಿದ್ದ ಒಂಬತ್ತು ಮಂದಿಯಲ್ಲೂ ವೈರಾಣು ಇರುವುದು ದೃಢವಾಗಿತ್ತು. ಬೆಲ್ಜಿಯಂನಲ್ಲಿ ಸಾಮುದಾಯಿಕವಾಗಿ ಕರೊನಾ ಹರಡುತ್ತಿದೆ ಎಂಬುದನ್ನು ಮಾರ್ಚ್ ಆರಂಭದಲ್ಲಿ ಖಚಿತಪಡಿಸಲಾಯಿತು. ಇದಾದ ಬಳಿಕ ಉತ್ತರ ಇಟಲಿಯಿಂದ ರಜಾ-ಮಜಾ ಅನುಭವಿಸಿ ಬಂದಿದ್ದವರಿಂದಲೂ ದೇಶದಲ್ಲಿ ಕರೊನಾ ಹರಡುವಿಕೆ ವ್ಯಾಪಕಗೊಂಡಿತು.

ಮಾರ್ಚ್ ಅಂತ್ಯದ ವೇಳೆಗೆ ದೇಶದ ಎಲ್ಲಾ 10 ಪ್ರಾಂತ್ಯಗಳಲ್ಲಿ ಕರೊನಾ ದೃಢಗೊಂಡಿತ್ತು. ಮೇ 21ರ ವೇಳೆಗೆ ದೇಶದಲ್ಲಿ 56,235 ಕರೊನಾ ಕೇಸುಗಳು ಪತ್ತೆಯಾಗಿವೆ. 9,186 ಮಂದಿ ಮೃತಪಟ್ಟಿದ್ದರೆ, 14,988 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ, ಬೆಲ್ಜಿಯಂ ಆಸ್ಪತ್ರೆಗಳಲ್ಲಿ 1,488 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಲ್ಜಿಯಂನಲ್ಲಿ ಕರೊನಾ ಸಾವಿನ ಪ್ರಮಾಣ ಅತ್ಯಧಿಕವಾಗಿದ್ದರೂ, ಅಂಕಿ-ಅಂಶಗಳಲ್ಲಿ ವ್ಯತ್ಯಾಸವಾಗಿರಬಹುದು ಎಂದು ಪ್ರಧಾನಮಂತ್ರಿ ಸೋಫಿ ವಿಲ್ಮ್ಸ್ ಅನುಮಾನಿಸಿದ್ದಾರೆ. ಕರೊನಾ ತಡೆಯಲು ಬೆಲ್ಜಿಯಂ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಉದ್ಯಮ ವ್ಯವಹಾರಗಳು ಸ್ಥಗಿತಗೊಂಡಿವೆ. ನೌಕರರ ಸಂಖ್ಯೆಯನ್ನೂ ಕಂಪನಿಗಳು ಕಡಿಮೆಗೊಳಿಸಿವೆ. ಪರಿಣಾಮವಾಗಿ 1.25 ಮಿಲಿಯನ್ ಮಂದಿ ತಾತ್ಕಾಲಿಕ ನಿರುದ್ಯೋಗಕ್ಕೆ ಒಳಗಾಗಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಬೆಲ್ಜಿಯಂನ ಮದ್ಯ ವ್ಯಾಪಾರಸ್ಥರು ಮದ್ಯಗಳನ್ನು ನೇರವಾಗಿ ಖರೀದಿದಾರರ ಮನೆಗಳಿಗೆ ಕಳುಹಿಸಿಕೊಡುವ ಕ್ರಮ ಅನುಸರಿಸಿದ್ದಾರೆ.