ಕಾನ್ಪುರ: ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ಕೈಯನ್ನೇ ಕಳೆದುಕೊಳ್ಳುವವರೆಗೂ ಮುಂದುವರಿದಿದೆ. ಬಿಜೆಪಿ ನಾಯಕನ ಮಧ್ಯಪ್ರವೇಶದ ಬಳಿಕವೂ ಮತ್ತೊಮ್ಮೆ ಗಲಾಟೆ ನಡೆದಿದ್ದು, ಪೊಲೀಸರು ಅನುಮಾನದ ಮೇರೆಗೆ ಒಂದಷ್ಟು ಜನರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಮಂಗಳವಾರ ತಡರಾತ್ರಿ ಇಂಥದ್ದೊಂದು ಘೋರ ಘಟನೆ ನಡೆದಿದ್ದು, ಬುಧವಾರ ಬೆಳಗಿನ ಜಾವದ ಸುಮಾರಿಗೆ ಇದು ಬಹಿರಂಗಗೊಂಡಿದೆ. ಉತ್ತರಪ್ರದೇಶದ ಕಾನ್ಪುರ ಘಟಮ್ಪುರ ಪ್ರದೇಶದಲ್ಲಿ ಈ ಪ್ರಕರಣ ವರದಿಯಾಗಿದೆ. 28 ವರ್ಷದ ಲಲಿತ್ ದ್ವಿವೇದಿ ಎಂಬಾತ ಕೈ ಕಳೆದುಕೊಂಡವ.
ಸ್ಥಳೀಯ ಬಿಜೆಪಿ ಮುಖಂಡ ಉಮೇಶ್ ದ್ವಿವೇದಿ ಅವರ ಸಂಬಂಧಿ ಆದ ಈ ಯುವಕನಿಗೂ ಹಾಗೂ ಹತ್ತಿರದ ಗೋಪಾಲ್ಪುರ ಗ್ರಾಮದ ಒಂದು ಗುಂಪಿನ ನಡುವೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ಉಂಟಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕ ಉಮೇಶ್ ದ್ವಿವೇದಿ ಮಧ್ಯಪ್ರವೇಶಿಸಿ ಎರಡೂ ಕಡೆಯವರಿಗೆ ಸಮಾಧಾನ ಹೇಳಿ ವಿಷಯ ತಣ್ಣಗಾಗಿಸಿದ್ದರು.
ಆದರೆ ಮಂಗಳವಾರ ಬಳಿಕ ಮತ್ತೆ ಲಲಿತ್ ಅಲ್ಲಿಗೆ ತೆರಳಿದ್ದು, ಆಗ ಅಲ್ಲಿದ್ದ ಗುಂಪಿನೊಂದಿಗೆ ಪುನಃ ಘರ್ಷಣೆ ಉಂಟಾಗಿದೆ. ಈ ಸಂದರ್ಭದಲ್ಲಿ ಆ ಗುಂಪಿನ ಬಲ ಹೆಚ್ಚಿದ್ದು ಅವರು ಲಲಿತ್ ಮೇಲೆ ಹಲ್ಲೆ ಎಸಗಿದ್ದಲ್ಲದೆ, ಬಂಡ-ಕಾನ್ಪುರ ರೈಲ್ವೆ ಹಳಿ ಮೇಲೆ ಆತನನ್ನು ಎಸೆದಿದ್ದರು. ಗೂಡ್ಸ್ ರೈಲು ಸಂಚರಿಸಿದ ಪರಿಣಾಮ ಲಲಿತ್ ಎಡಗೈ ತುಂಡಾಗಿ ಹೋಗಿತ್ತು. ಮಂಗಳವಾರ ತಡರಾತ್ರಿ ಪ್ರಕರಣ ನಡೆದಿದ್ದರಿಂದ ಬೇರೆ ಯಾರ ಗಮನಕ್ಕೂ ಬಂದಿರಲಿಲ್ಲ.
ಇದನ್ನೂ ಓದಿ: ಸಿಎಂ ತವರಲ್ಲಿ ಮಾಟ-ಮಂತ್ರದ ಸದ್ದು!
ಬುಧವಾರ ಬೆಳಗಿನ ಜಾವ ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಲಿತ್ನನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಈತನನ್ನು ಲಾಲಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲಖನೌದಲ್ಲಿನ ಕೆಜಿಎಂಯು ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)