ಅಪ್ಪ ಜೈಲಿನಲ್ಲಿ, ಅಮ್ಮ ಇನ್ನೆಲ್ಲೋ! ನಾಯಿ ಜತೆ ರಸ್ತೆಗೆ ಬಿದ್ದ ಬಾಲಕನ ಮನಕಲಕುವ ಕಥೆ

child
Published on

ಲಖನೌ: ಮನೆಯ ಕೋಣೆಯಲ್ಲಿ ಬೆಚ್ಚಗೆ ಮಲಗಬೇಕಿದ್ದ ಬಾಲಕ ಯಾವುದೋ ಅಂಗಡಿಯ ಮುಂದೆ ಮಲಗಿದ್ದಾನೆ. ಅಮ್ಮನ ಮಡಿಲಲ್ಲಿರಬೇಕಾದವನ ಮಡಿಲಲ್ಲಿ ನಾಯಿಯಿದೆ. ಇಂತದ್ದೊಂದು ಮನಕಲಕುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಆ ಫೋಟೋದಲ್ಲಿರುವ ಬಾಲಕನ ಕಥೆ ಹೊರಬಿದ್ದಿದೆ.

ಫೋಟೋದಲ್ಲಿರುವ ಬಾಲಕನ ಹೆಸರು ಅಂಕಿತ್​. ಈತನ ತಂದೆ ಯಾವುದೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ತಾಯಿಯೂ ಬಿಟ್ಟು ಹೋಗಿದ್ದಾಳೆ. ತಂದೆ ತಾಯಿಯನ್ನು ಬಿಟ್ಟು ಕುಟುಂಬದ ಯಾರೋಬ್ಬರೂ ಗೊತ್ತಿರದ ಬಾಲಕ ತನ್ನ ಪ್ರೀತಿಯ ನಾಯಿಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಟೀ ಶಾಪ್​ ಒಂದರಲ್ಲಿ ಕೆಲಸ ಮಾಡಿ, ತನ್ನ ಮತ್ತು ನಾಯಿಯ ಹೊಟ್ಟೆ ತುಂಬಿಸಿಕೊಳ್ಳುತ್ತಾನಂತೆ.

ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ ಮುಜಾಫರ್​ನಗರ್ ಆಡಳಿತ ಎಚ್ಚೆತ್ತುಕೊಂಡಿದ್ದು, ಬಾಲಕನನ್ನು ಹುಡುಕಿದೆ. ಇದೀಗ ಬಾಲಕನನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯಲ್ಲಿಟ್ಟುಕೊಳ್ಳಲಾಗಿದೆ. ಆತನಿಗೆ ಉತ್ತಮ ಶಿಕ್ಷಣವನ್ನೂ ನೀಡಲಾಗುತ್ತಿರುವುದಾಗಿ ತಿಳಿಸಲಾಗಿದೆ. (ಏಜನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net