ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಶಾಪಿಂಗ್ ಕ್ರೇಜ್ ಜನರಲ್ಲಿ ಸಾಕಷ್ಟು ಹೆಚ್ಚಾಗಿದೆ. ಆಹಾರ ಹಾಗೂ ಬಟ್ಟೆಯಿಂದ ಹಿಡಿದು ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ ವಸ್ತುಗಳವರೆಗೂ ಪ್ರತಿಯೊಂದನ್ನು ಆನ್‌ಲೈನ್‌ನಲ್ಲೇ ಆರ್ಡರ್ ಮಾಡುತ್ತಿದ್ದಾರೆ. ಕಂಪನಿಗಳು ಕೂಡ ಜನರಿಗೆ ವೇಗದ ಡೆಲಿವರಿ ಸೇವೆಗಳನ್ನು ನೀಡಲು ಸಾಕಷ್ಟು ಪ್ರಯತ್ನಿಸುತ್ತಿವೆ. ಕೆಲ ಕಂಪನಿಗಳು ಕೆಲವೇ ನಿಮಿಷಗಳಲ್ಲಿ ಬೇಕಾದ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತವೆ. ಆದರೆ, ವೇಗದ ಸೇವೆ ನೀಡುವ ಧಾವಂತದಲ್ಲಿ ಕೆಲವೊಮ್ಮೆ ಎಡವಟ್ಟುಗಳು ಸಹ ಆಗುತ್ತವೆ ಎನ್ನುವುದನ್ನು ತಾಜಾ ಘಟನೆಯೇ ಸಾಕ್ಷಿ.
ಪುರುಷರ ಒಳಉಡುಪುಗಳನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಇ-ಕಾಮರ್ಸ್ ಕಂಪನಿ ತಪ್ಪಾಗಿ ಬಿಕಿನಿಯನ್ನು ತಲುಪಿಸಿದ್ದು, ಈ ಘಟನೆಗೆ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೆಹಲಿ ಮೂಲದ ಪ್ರಿಯಾಂಶ್ ಎಂಬ ವ್ಯಕ್ತಿ ಇತ್ತೀಚೆಗೆ ಬ್ಲಿಂಕಿಟ್ ಆ್ಯಪ್ ಮೂಲಕ ಪುರುಷರ ಒಳ ಉಡುಪುಗಳನ್ನು ಆರ್ಡರ್ ಮಾಡಿದ್ದರು. ವೇಗದ ಸೇವೆ ನೀಡುವ ಆತುರದಲ್ಲಿ ಬ್ಲಿಂಕಿಟ್ ಎಡವಟ್ಟು ಮಾಡಿದೆ. ಪ್ರಿಯಾಂಶ್ ಅವರು ಪುರುಷರ ಒಳ ಉಡುಪುಗಳನ್ನು ಆರ್ಡರ್ ಮಾಡಿದರೆ, ಬ್ಲಿಂಕಿಟ್ ಮಹಿಳೆಯರ ಬಿಕಿನಿಯನ್ನು ಡೆಲಿವರಿ ಮಾಡಿದೆ.
ಡೆಲಿವರಿ ಪ್ಯಾಕೆಟ್ ಓಪನ್ ಮಾಡಿ ನೋಡಿದ ಪ್ರಿಯಾಂಶ್ ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಬ್ಲಿಂಕಿಟ್ ಕಸ್ಟಮರ್ ಕೇರ್ಗೆ ಕರೆ ಮಾಡಿ ದೂರು ನೀಡಿದ್ದಾರೆ. ಮರುಪಾವತಿಗೆ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಅವರು ತಮಗಾದ ಅನ್ಯಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
@priyansh_who ಹೆಸರಿನ ಎಕ್ಸ್ ಖಾತೆಯಲ್ಲಿ ಬ್ಲಿಂಕಿಟ್ ಆ್ಯಪ್ ಡೆಲಿವರಿ ಮಾಡಿದ ಕವರ್ ಮತ್ತು ಬಿಕಿನಿಯ ಫೋಟೋವನ್ನು ಪ್ರಿಯಾಂಶ್ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 07 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಕೇವಲ ಮೂರು ದಿನಗಳಲ್ಲಿ 3.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, ಭಾರಿ ಚರ್ಚೆಗೆ ಗುರಿಯಾಗಿದೆ. (ಏಜೆನ್ಸೀಸ್)