ಪಟನಾ: ದೂರು ನೀಡಲು ಬಂದ ಶಿಕ್ಷಕನಿಗೆ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ಹಾಕಿರುವ ಆತಂಕಕಾರಿ ಘಟನೆ ಬಿಹಾರ ರಾಜಧಾನಿ ಪಟನಾದ ಜಮುಯಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಒಂದು ಸೆಕೆಂಡ್ನಲ್ಲಿ ನಿನ್ನನ್ನು ಭಯೋತ್ಪಾದಕ ಎಂದು ಘೋಷಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ಶಿಕ್ಷಕನಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಎರಡ್ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೌಟುಂಬಿಕ ವಿವಾದವನ್ನು ಇತ್ಯರ್ಥ ಪಡಿಸಿಕೊಳ್ಳಲು ಶಿಕ್ಷಕ ಸೇರಿದಂತೆ ಆತನ ಇಡೀ ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ರಾಜೇಶ್ ಶರಣ್ ಹೆಸರಿನ ಪೊಲೀಸ್ ಅಧಿಕಾರಿ ಮತ್ತು ಮಫ್ತಿಯಲ್ಲಿದ್ದ ಇತರ ಪೊಲೀಸ್ ಸಿಬ್ಬಂದಿ ಶಿಕ್ಷಕನ ಸುತ್ತ ಕುಳಿತಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡು ದಿಢೀರನೇ ತಾನು ಕೂತಿದ್ದ ಕುರ್ಚಿಯಿಂದ ಎದ್ದ ರಾಜೇಶ್ ಶರಣ್, ಶಿಕ್ಷಕನಿಗೆ ಬೆರಳು ತೋರಿಸಿ ಬೆದರಿಕೆ ಹಾಕಿದರು.
ಜನರನ್ನು ಭಯೋತ್ಪಾದಕರು ಎಂದು ಘೋಷಿಸುವುದು ನಮ್ಮ ಕೆಲಸ. ಒಂದೇ ಸೆಕೆಂಡ್ನಲ್ಲಿ ನಿನ್ನನ್ನು ಭಯೋತ್ಪಾದಕ ಎಂದು ಘೋಷಣೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ. ಇಷ್ಟಾದರೂ ಅಲ್ಲಿದ್ದ ಜನರು ಪ್ರತಿರೋಧ ತೋರದೇ ಸುಮ್ಮನಿದ್ದರು. ಇದೀಗ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸ್ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್)ವಿಡಿಯೋ ಕೃಪೆ: ಎನ್ಡಿಟಿವಿ ಟ್ವಿಟರ್