ನ್ಯೂಸ್

ಕಳ್ಳನನ್ನು ಹಿಡಿಯಲು ಬಂದ ಪೊಲೀಸ್​ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಗ್ರಾಮಸ್ಥರು!

ಕೋಲ್ಕತ: ಕಳ್ಳತನ ಪ್ರಕರಣದ ತನಿಖೆಗೆಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಬಿಹಾರದ ಪೊಲೀಸ್​ ಅಧಿಕಾರಿಯನ್ನು ಗ್ರಾಮಸ್ಥರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬಂಗಾಳದ ಉತ್ತರ ದಿನಾಜ್​ಪುರದಲ್ಲಿ ನಡೆದಿದೆ.

ಬಿಹಾರದ ಕಿಶಾನ್​ಗಂಜ್​ ಪೊಲೀಸ್​ ಠಾಣೆಯ ಸ್ಟೇಸನ್​ ಹೌಸ್​ ಆಫೀಸರ್​ ಅಶ್ವಿನ್​ ಕುಮಾರ್​ ಮೃತ ದುರ್ದೈವಿ. ಉತ್ತರ ದಿನಾಜ್​ಪುರ್​ನ ಗೋಲ್ಪೋಖರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಘಟನೆ ನಡೆದಿದೆ. ಈ ಗ್ರಾಮದ ಗುಂಪೊಂದು ಅಶ್ವಿನ್​ ಅವರನ್ನು ಹಿಡಿದು ಥಳಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

ಅಶ್ವಿನ್​ ಅವರು ಬೈಕ್​ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡ್​ ಮಾಡಲು ಗ್ರಾಮಕ್ಕೆ ಬಂದಿದ್ದಾಗ ಘಟನೆ ನಡೆದಿದೆ. ಇಸ್ಲಾಂಪುರ್​ ಎಸ್​ಪಿ ನಮ್ಮೊಂದಿಗಿದ್ದಾರೆ. ಅಶ್ವಿನ್​ ಮೇಲೆ ದಾಳಿ ಮಾಡಿದವರನ್ನು ನಾವು ಬಂಧಿಸುತ್ತೇವೆ ಎಂದು ಐಜಿ ಪೂರ್ನಿಯಾ ರೇಂಜ್​ ಹೇಳಿದ್ದಾರೆ.

ಅಶ್ವಿನ್​ ಅವರು ಖದೀಮನಿಗಾಗಿ ಹುಡುಕಾಡುವಾಗ ಅವರಿಗೆ ಸ್ಥಳೀಯ ಪೊಲೀಸರ ನೆರವು ಸಿಗಲಿಲ್ಲ. ಹೀಗಾಗಿ ಏಕಾಂಗಿಯಾಗಿ ಕಾರ್ಯಾಚರಣೆಗೆ ಇಳಿದಿದ್ದೇ ಅವರಿಗೆ ಮುಳುವಾಯಿತು ಎಂದು ಹೇಳಲಾಗುತ್ತಿದೆ. ಸದ್ಯ ಘಟನೆ ಸಂಬಂಧ ಓರ್ವ ಆರೋಪಿಯನ್ನು ಪಂಜಿಪರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ತೆರಳುವ ಮುನ್ನ ಅಶ್ವಿನ್​ ಅವರು ಬಂಗಾಳದ ಸ್ಥಳೀಯ ಪೊಲೀಸ್​ ಠಾಣೆಯ ನೆರವು ಕೇಳಿದ್ದರು. ಅವರು ಸಹ ಒಂದು ತಂಡವನ್ನು ಕಳುಹಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ, ತಮ್ಮ ಮಾತನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಬಿಹಾರ ಪೊಲೀಸ್​​ ಅಸೋಸಿಯೇಷನ್​ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.

ಆದಾಗ್ಯು ಅಶ್ವಿನ್​ ಅವರು ಉತ್ತರ ದಿನಾಜ್​ಪುರದ ಗ್ರಾಮಕ್ಕೆ ಅಶ್ವಿನ್​ ಭೇಟಿ ನೀಡಿದಾಗ ಗ್ರಾಮಸ್ಥರು ಅಶ್ವಿನ್​ ಮೇಲೆ ದಂಡ ಮತ್ತು ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)