ನ್ಯೂಸ್

ಇಳಿಮುಖದತ್ತ ಯಮುನಾ ನದಿಯ ನೀರಿನ ಮಟ್ಟ: ಮೆಟ್ರೋ ರೈಲಿನ ವೇಗಕ್ಕೆ ಹೇರಿದ್ದ ನಿರ್ಬಂಧ ತೆರವು

ನವದೆಹಲಿ: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿದೆ. ನಗರದ ಬಹುತೇಕ ಭಾಗ ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸುಪ್ರೀಂಕೋರ್ಟ್​, ಕೆಂಪುಕೋಟೆ ಹಾಗೂ ರಾಜ್​ಘಾಟ್ ಸೇರಿದಂತೆ ಪ್ರಮುಖ ಪ್ರದೇಶಗಳಿಗೂ ಸಹ ನೀರು ನುಗ್ಗಿದೆ. ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸದ್ಯಕ್ಕೆ ದೆಹಲಿ ಮಂದಿಯ ಪಾಲಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲಿನ ವೇಗದ ನಿರ್ಬಂಧವನ್ನು ಸಡಿಲಗೊಳಿಸಿದೆ.

ಯಮುನಾ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದರಿಂದ ಮೆಟ್ರೋ ರೈಲುಗಳ ವೇಗಕ್ಕೆ ನಿರ್ಬಂಧ ಹೇರಲಾಗಿತ್ತು. ಯಮುನಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಚಲಿಸುವಾಗ ನಿಧಾನವಾಗಿ ಚಲಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್​ಸಿ) ಸುತ್ತೋಲೆ ಹೊರಡಿಸಿತ್ತು. ಆದರೆ, ನದಿಯಲ್ಲಿ ನೀರಿನ ಮಟ್ಟ ಇಳಿಮುಖ ಹಾದಿಯಲ್ಲಿದ್ದು, ರೈಲುಗಳು ಮಾಮೂಲಿ ವೇಗದಲ್ಲಿ ಚಲಿಸಬಹುದೆಂದು ಹೇಳಿ ನಿರ್ಬಂಧವನ್ನು ತೆರವುಗೊಳಿಸಿದೆ.

ದೆಹಲಿಯಲ್ಲಿ ಮಾನ್ಸೂನ್​ ಮಳೆ ಅಬ್ಬರಿಸುತ್ತಿದ್ದು, 45 ವರ್ಷಗಳ ಹಿಂದಿನ ಮಳೆ ದಾಖಲೆ ಮುರಿದಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಹರಿಯಾಣದ ಹುತ್ನಿಕುಂಡ ಡ್ಯಾಮ್​ನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿತ್ತು. ನಿನ್ನೆಯಷ್ಟೇ 208 ಮೀಟರ್​ಗಿಂತ ಹೆಚ್ಚಿದ್ದ ನೀರಿನ ಮಟ್ಟ, ಇಂದು ಬೆಳಗ್ಗೆ 207.8ಕ್ಕೆ ಕುಸಿದಿದೆ. ಇದು ಸಂತಸದ ಸಂಗತಿಯಾದರೂ ದೆಹಲಿಯ ಅನೇಕ ಏರಿಯಾಗಳು ಮಾತ್ರ ಇನ್ನೂ ಪ್ರವಾಹದಲ್ಲಿ ಸಿಲುಕಿವೆ.

1978ರಲ್ಲಿ ಭಾರೀ ಮಳೆಯಿಂದ ಯಮುನಾ ನದಿ ನೀರಿನ ಮಟ್ಟ 207.49 ಮೀಟರ್​ ತಲುಪಿತ್ತು. ಆದರೆ, ಈಗ ಅದನ್ನು ಮೀರಿ 208.66 ಮೀಟರ್​ ಅಡಿ ತಲುಪಿದೆ. ನದಿಯ ಗರಿಷ್ಠ ನೀರಿನ ಮಟ್ಟ 205 ಮೀಟರ್​. ಆದರೆ, ಅದನ್ನು ಮೀರಿ ಯಮುನಾ ನದಿ ಹರಿಯುತ್ತಿದ್ದು, ದೆಹಲಿಯ ಅನೇಕ ಭಾಗಗಳು ಜಲಾವೃತಗೊಂಡಿವೆ.

ದೆಹಲಿಯ ಪ್ರಮುಖ ಭಾಗಗಳೇ ನೀರಿನಿಂದ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​) ರಕ್ಷಣಾ ಕಾರ್ಯದಲ್ಲಿ ತೊಡಗಿವೆ. (ಏಜೆನ್ಸೀಸ್​)