ಬೆಂಗಳೂರು: ಟಾಲಿವುಡ್ಗೂ ಡ್ರಗ್ಸ್ ಪ್ರಕರಣಗಳಿಗೂ ಎಲ್ಲಿಲ್ಲದ ನಂಟು ಎಂಬ ವಿಚಾರ ಆಗಿಂದಾಗೆ ಕೇಳಿ ಬರುತ್ತಿರುತ್ತದೆ. ಇದಕ್ಕೆ ಪೂರಕವೆಂಬಂತೆ ಮೇ 19ರಂದು ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ ಇದರಲ್ಲಿ ಟಾಲಿವುಡ್ನ ಖ್ಯಾತ ನಟ ಶ್ರೀಕಾಂತ್ ಮೇಕಾ ಅವರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ನಟ ಶ್ರೀಕಾಂತ್ ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರು ದಾಳಿ ನಡೆಸಿದ ರೇವ್ ಪಾರ್ಟಿಯಲ್ಲಿ ನನ್ನ ಹೆಸರು ಕೇಳಿಬಂದಿದ್ದು ನೋಡಿ ನನಗೆ ಅಚ್ಚರಿ ಆಯಿತು. ಈ ಸುದ್ದಿ ಕೇಳಿ ಮೊದಲಿಗೆ ನನ್ನ ಕುಟುಂಬದರು ನಕ್ಕರು. ಆದರೆ ಯೂಟ್ಯೂಬ್ನಲ್ಲಿ ಈ ಬಗ್ಗೆ ಅನೇಕ ಸುದ್ದಿಗಳು ಹರಿದಾಡಲು ಆರಂಭಿಸಿದಾದ ನಾನು ಸ್ಪಷ್ಟನೆ ನೀಡಲು ನಿರ್ಧರಿಸಿದೆ. ನಾನು ನನ್ನ ಮನೆಯ ಮುಂಭಾಗ ನಿಂತುಕೊಂಡು ಈ ವಿಡಿಯೋ ಮಾಡುತ್ತಿದ್ದೇನೆ.
ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಮಾಧ್ಯಮದ ಅನೇಕ ಸ್ನೇಹಿತರು ನನಗೆ ಕರೆ ಮಾಡಿ ವಿಷಯವನ್ನು ಸ್ಪಷ್ಟಪಡಿಸಿಕೊಂಡರು. ಆದರೆ ಕೆಲವು ವಾಹಿನಿಯವರು ಖಚಿತತೆ ಇಲ್ಲದೇ ಸುದ್ದಿ ಪ್ರಸಾರ ಮಾಡಿದರು. ಅದು ಅವರ ತಪ್ಪಲ್ಲ. ಯಾಕೆಂದರೆ, ಮೊದಲ ಬಾರಿಗೆ ನಾನು ವಿಡಿಯೋಗಳಲ್ಲಿ ಗಡ್ಡ ಇರುವ ವ್ಯಕ್ತಿಯನ್ನು ನೋಡಿದಾಗ ನನ್ನ ರೀತಿ ಕಾಣಿಸಿದ್ದಾನೆ.
ರೇವ್ ಪಾರ್ಟಿಗಳಿಗೆ ತೆರಳುವ ಅಭ್ಯಾಸ ನನಗೆ ಇಲ್ಲ. ಅದರ ಅರ್ಥ ಏನು ಎಂಬುದೇ ನನಗೆ ತಿಳಿದಿಲ್ಲ. ಕೆಲವೊಮ್ಮೆ ನಾನು ಬರ್ತ್ಡೇ ಪಾರ್ಟಿಗಳಿಗೆ ಹೋಗುತ್ತೇನೆ. ಆದರೆ ಒಂದು ಗಂಟೆಯೊಳಗೆ ವಾಪಸ್ ಬರುತ್ತೇನೆ. ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಅದರ ಸತ್ಯಾಸತ್ಯತೆಯನ್ನು ಖಚಿತ ಮಾಡಿಕೊಳ್ಳಿ ಎಂದು ಮಾಧ್ಯಮದವರಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಯಾಕೆಂದರೆ, ಈ ಮೊದಲು ಕೂಡ ನಾನು ವಿಚ್ಛೇದನ ಪಡೆಯುತ್ತೇನೆ ಅಂತ ಗಾಳಿಸುದ್ದಿ ಹಬ್ಬಿಸಿದ್ದಾಗಿ ನಟ ಶ್ರೀಕಾಂತ್ ಹೇಳಿದ್ದಾರೆ.