ಬಳ್ಳಾರಿಯ ನೂತನ ಡಿಸಿ ಪ್ರಶಾಂತ್ ಕುಮಾರ್ ಮಿಶ್ರ 
ನ್ಯೂಸ್

ಬಳ್ಳಾರಿಗೆ ನೂತನ ಜಿಲ್ಲಾಧಿಕಾರಿ ಆಯ್ಕೆ; ಕೊನೆಗೂ ಬಿತ್ತು ಶಾಸಕರ ಹಗ್ಗ-ಜಗ್ಗಾಟಕ್ಕೆ ತೆರೆ…

ಬಳ್ಳಾರಿ: ಕೆಲ ದಿನಗಳಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಆಯ್ಕೆ ವಿಚಾರವಾಗಿ ಗೊಂದಲ ಉಂಟಾಗಿದ್ದು ಇದೀಗ ನೂತನ ಡಿ.ಸಿ ಆಗಿ ಪ್ರಶಾಂತ್ ಕುಮಾರ್ ಮಿಶ್ರ ನೇಮಕವಾಗಿದ್ದಾರೆ.

ಪ್ರಶಾಂತ್ ಕುಮಾರ್ ಮಿಶ್ರ 2014ರ ಬ್ಯಾಚ್​ನ ಐಎಎಸ್ ಅಧಿಕಾರಿಯಾಗಿದ್ದು ಈ ಹಿಂದೆ ಕೆಎಸ್ಆರ್​ಟಿಸಿ ನಿರ್ದೇಶಕರಾಗಿದ್ದರು. ಅವರು ಇಂದಿನಿಂದ ಬಳ್ಳಾರಿ ನೂತನ ಡಿಸಿಯಾಗಿ ನೇಮಕವಾಗಿದ್ದು ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಪವನ್ ಕುಮಾರ್ ಮಾಲಪಾಟಿ ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದರು.

ಕಳೆದ ಸೋಮವಾರ ಪವನ್ ಕುಮಾರ್ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಸರ್ಕಾರ ವಿಜಯನಗರ ಜಿಲ್ಲೆಯ ಮಾಜಿ ಡಿಸಿ ಟಿ.ವೆಂಕಟೇಶ್ ನೇಮಕ ಮಾಡಿತ್ತು. ಆದರೆ ವೆಂಕಟೇಶ್ ನೇಮಕದ ಬಗ್ಗೆ ಸಚಿವ ನಾಗೇಂದ್ರ ಹಾಗೂ ಸಂಡೂರು ಶಾಸಕರ ನಡುವೆ ಹಗ್ಗ ಜಗ್ಗಾಟ ನಡೆದಿತ್ತು. ಈ ಕಾರಣದಿಂದಾಗಿ ಬಳ್ಳಾರಿಯ ಡಿ.ಸಿ ಯಾರಾಗುತ್ತಾರೆ ಎನ್ನುವ ಗೊಂದಲ ಉಂಟಾಗಿತ್ತು.

ಈ ಸಂದರ್ಭ, ವೆಂಕಟೇಶ್ ಪರ ನಾಗೇಂದ್ರ ಹಾಗೂ ವಿರುದ್ಧವಾಗಿ ಸಂಡೂರು ಶಾಸಕ ತುಕಾರಾಂ ಪಟ್ಟು ಹಿಡಿದಿದ್ದರು. ಕೊನೆಗೆ ಅಳೆದು ತೂಗಿ ವೆಂಕಟೇಶ್ ಬದಲಿಗೆ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ಬಳ್ಳಾರಿ ಡಿಸಿ ಆಗಿ ಸರ್ಕಾರ ನೇಮಿಸಿದೆ.