ನ್ಯೂಸ್

ಬಾಯ್​ಫ್ರೆಂಡ್​ ಕೈ ಹಿಡಿದಿದ್ದಕ್ಕೆ ರಂಪ ಮಾಡಿದವ್ರು, ಯಾರೋ ರೇಗಿಸಿದಾಗ ಮಾತ್ರ ಸುಮ್ಮನಿದ್ರು; ಬೆಂಗಳೂರು ಪೊಲೀಸರ ವಿರುದ್ಧ ಮಹಿಳೆ ಗಂಭೀರ ಆರೋಪ

ಬೆಂಗಳೂರು: ಸಮಾಜದಲ್ಲಿರುವ ದುಷ್ಠ ಶಕ್ತಿಗಳಿಂದ ಜನರಿಗೆ ಸದಾ ರಕ್ಷಣೆ ನೀಡುವವರು ಯಾರು ಎಂದರೆ ಮೊದಲಿಗೆ ಕೇಳಿ ಬರುವ ಹೆಸರೆಂದರೆ ಪೊಲೀಸರದ್ದು. ಜನ, ಜಾಗ ಯಾವುದೇ ಇರಲಿ ಸದಾ ಜನರ ಕಷ್ಟಗಳಿಗೆ ಸ್ಪಂದಿಸುವ ಪೊಲೀಸರೇ ಇದೀಗ ಪ್ರೇಮಿಗಳ ಜೊತೆ ಅನುಚಿತವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಿಳೆ ಈ ಬಗ್ಗೆ ಸಾಮಾಜಿಕ ಮಾಧ್ಯಮ ರೆಡ್ಡಿಟ್​ನಲ್ಲಿ ಬರೆದುಕೊಂಡಿದ್ದು, ತನ್ನ ಬಾಯ್​ಫ್ರೆಂಡ್​ ಜೊತೆ ತೆರಳುತ್ತಿದ್ದಾಗ ಪೊಲೀಸರು ಅನುಚಿತ ವರ್ತಿಸಿ ಬೆದರಿಕೆ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ ವೈರಲ್​ ಆಗಿದೆ.

ಪೊಲೀಸರ ಬಗ್ಗೆ ನನಗೆ ಅಪಾರವಾದ ಗೌರವವಿತ್ತು. ಆದರೆ, ಇಂದು ಅದೆಲ್ಲಾ ಮಾಯವಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಬಾಯ್​ಫ್ರೆಂಡ್​ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸುಮ್ಮನೇ ಕೈ ಹಿಡಿದೆ ಅಷ್ಟೇ. ಈ ವೇಳೆ ಇದನ್ನು ಗಮನಿಸಿದ ಅಧಿಕಾರಿಯೊಬ್ಬರು ನಮ್ಮ ಬಳಿ ಬಂದು ಅನುಚಿತವಾಗಿ ವರ್ತಿಸುತ್ತಿದ್ದೀರಾ ಎಂದು ಆರೋಪಿಸಿ ನಮ್ಮನ್ನು ದೂಷಿಸಲು ಶುರು ಮಾಡಿದರು. ಬಳಿಕ ಪೊಲೀಸ್​ ಠಾಣೆಗೆ ಬರುವಂತೆ ಬೆದರಿಕೆ ಹಾಕಿದರು.

ಬಳಿಕ ಈ ವಿಚಾರವನ್ನು ನಿಮ್ಮ ಪೋಷಕರಿಗೆ ತಿಳಿಸುವುದಾಗಿ ಹೆದರಿಸಿದ ಅಧಿಕಾರಿಯು ಆ ಬಳಿಕ ನನ್ನೊಬ್ಬಳಿಗೆ ತೆರಳುವಂತೆ ಸೂಚಿಸಿದರು. ಪೊಲೀಸ್​ ಅಧಿಕಾರಿಯ ಎದುರೇ ಬೈಕಿನಲ್ಲಿ ಬಂದ ಯುವಕನೋರ್ವ ನನ್ನನ್ನು ಅವರ ಮುಂದೆಯೇ ರೇಗಿಸಿದ. ನನಗೆ ಸಿಟ್ಟು ಬಂದು ನಾನು ಆತನಿಗೆ ಬೈದೆ. ಇದನ್ನು ನೋಡಿ ಕೂಡ ಪೊಲೀಸ್​ ಅಧಿಕಾರಿ ರೇಗಿಸಿದವನಿಗೆ ಏನು ಮಾಡದೆ ಸುಮ್ಮನೇ ನಿಂತಿದ್ದರು. ನಾನು ನನ್ನ ಬಾಯ್​ಫ್ರೆಂಡ್​ ಕೈ ಹಿಡಿದಿದ್ದಕ್ಕೆ ದೊಡ್ಡ ಸೀನ್​ ಕ್ರಿಯೇಟ್​ ಮಾಡಿದ ಪೊಲೀಸರು ಯಾರೋ ಒಬ್ಬ ನನ್ನನ್ನು ಅವರ, ಮುಂದೆ ರೇಗಿಸಿದಾಗ ಯಾಕೆ ಸುಮ್ಮನಿದ್ದರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆ ಬಳಿಕ ಬಾಯ್​ಫ್ರೆಂಡ್​ನನ್ನು ಹಣ ಪಡೆದು ಬಿಟ್ಟು ಕಳುಹಿಸಿದ್ದಾರೆ. ನಾನು ಒಳ್ಳೆಯ ಪೊಲೀಸರನ್ನು ನೋಡಿದ್ದೇನೆ. ಆದರೆ, ಈ ಅಧಿಕಾರಿ ಮಾಡಿದ್ದನ್ನು ನೋಡಿದರೆ ಜನರು ಏಕೆ ಪೊಲೀಸರನ್ನು ದ್ವೇಷಿಸುತ್ತಾರೆ ಎಂಬುದು ಅರ್ಥವಾಯಿತು ಎಂದು ಮಹಿಳೆ ಬರೆದುಕೊಂಡಿದ್ದಾರೆ.

ಇತ್ತ ಮಹಿಳೆ ಬರೆದುಕೊಂಡಿರುವ ಪೋಸ್ಟ್​ ವೈರಲ್​ ಆಗಿದ್ದು, ಹಲವರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ. ರೆಡ್ಡಿಟ್​ನಲ್ಲಿ ಪೋಸ್ಟ್​ ಮಾಡುವ ಬದಲು ಟ್ವಿಟರ್​ನಲ್ಲಿ ಹಾಕಿ ತ್ವರಿತ ಕ್ರಮ ಕೈಗೊಳ್ಳುತ್ತಾರೆ ಎಂದು ಕಮೆಂಟ್​ ಹಾಕಿದ್ದಾರೆ. ಹಲವರು ಪೊಲೀಸರ ನಡೆಯನು ಖಂಡಿಸಿದ್ದು, ಕಠಿಣ ಕ್ರಮ ಕಯಗೊಳ್ಳುವಂತೆ ಆಗ್ರಹಿಸಿದ್ದಾರೆ.