ನವದೆಹಲಿ: ಮುಂದಿನ ವರ್ಷ (2025) ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯು ಆತಿಥೇಯರು ಹಾಗೂ ಭಾರತ ನಡುವಿನ ಕಿತ್ತಾಟಕ್ಕೆ ಕಾರಣವಾಗಿದ್ದು, ಒಂದಿಲ್ಲೊಂದು ವಿಷಯಕ್ಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭದ್ರತೆಯ ಕಾರಣದಿಂದಾಗಿ ಭಾರತ ಪಾಕಿಸ್ತಾನದಲ್ಲಿ ಆಡಲು ಸಿದ್ದವಿಲ್ಲವೆಂದು ಹೇಳಿದ್ದು, ಹೈಬ್ರಿಡ್ ಮಾದರಿಯಲ್ಲಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಬಿಸಿಸಿಐ ಕಡ್ಡಿ ಮುರಿದಂತೆ ಹೇಳಿದೆ. ಬಿಸಿಸಿಐಗೆ ಬೆಂಬಲ ಸೂಚಿಸಿರುವ ಐಸಿಸಿ ಹ್ರಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಿದರೆ ಅದರ ಖರ್ಚು ವೆಚ್ಚ ಭರಿಸುವುದಾಗಿಯೂ ಪಿಸಿಬಿಗೆ ಹೇಳಿದೆ. ಇದರ ಹೊರತಾಗಿಯೂ ತನ್ನ ಹಠವನ್ನು ಬಿಡದೆ ಇರುವುದು ಐಸಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಭಾರತ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗುವ ಕುರಿತು ಈ ಹಿಂದೆ ಮಾತನಾಡಿದ್ದ ಹರ್ಭಜನ್ ಸಿಂಗ್ ಭದ್ರತೆಯ ಕಾರಣಗಳನ್ನು ಉಲ್ಲೇಖಿಸಿದ್ದರು. ಇದಲ್ಲದೆ ಪಾಕಿಸ್ತಾನದಲ್ಲಿ ಪ್ರತಿನಿತ್ಯ ನಡೆಯುವ ಘಟನೆಗಳನ್ನು ಉಲ್ಲೇಖಿಸಿ ಹರ್ಭಜನ್ ಭಾರತ ತಂಡ ಪಾಕಿಸ್ತಾನಕ್ಕೆ ಹೋಗದೆ ಇರುವಂತೆ ಮನವಿ ಮಾಡಿದ್ದರು. ಹರ್ಭಜನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ತನ್ವೀರ್ ಅಹ್ಮದ್ ನಾವು ಸಿಂಹಗಳಿದ್ದಂತೆ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ತನ್ವೀರ್, ನಾವು ಸಿಂಹಗಳು. ನಿಮ್ಮ ಗುಹೆಗೆ ನಾವು ಬಂದು ಆಡಿದಂತೆ ನೀವು ನಮ್ಮ ನೆಲದಲ್ಲಿ ಆಟವಾಡಿ. ಭದ್ರತೆಯ ವಿಚಾರಕ್ಕೆ ಬರುವುದಾದರೆ ನಾವು ನಿಮಗೆ ಸಂಪೂರ್ಣ ಸೆಕ್ಯೂರಿಟಿಯನ್ನು ಕೊಡುತ್ತೇವೆ. ನೀವು ಭದ್ರತೆಯ ಬಗ್ಗೆ ಯೋಚಿಸಬೇಡಿ. ಪಾಕಿಸ್ತಾನದ ಆಟಗಾರರು ಭಾರತದ ನೆಲಕ್ಕೆ ಹೋಗಿ ಧೈರ್ಯವಾಗಿ ಆಟವಾಡಿ ಬಂದರು. ಅದನ್ನು ನಾವು ಶೌರ್ಯ ಎಂದು ಕರೆಯುತ್ತೇವೆ. ಅದೇ ರೀತಿ ನೀವುಗಳು ದಯವಿಟ್ಟು ನಮ್ಮ ನೆಲಕ್ಕೆ ಬಂದು ಚಾಂಪಿಯನ್ಸ್ ಟ್ರೋಫಿ ಆಡಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ತನ್ವೀರ್ ಅಹ್ಮದ್ ವಿನಂತಿಸಿದ್ದಾರೆ.
ಇದನ್ನೂ ಓದಿ: ಮುಕೇಶ್ ಅಂಬಾನಿಯ ಆಂಟಿಲಿಯಾದ ಹನ್ನೊಂದು ಪಟ್ಟು ಬೆಲೆ ಬಾಳುತ್ತದೆ ಭಾರತದ ಈ ವಸ್ತು!
ಆರ್ಥಿಕ ಸಂಕಷ್ಟದ ಭಯ
ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಗೆ ಇರುವ ಕ್ರೇಜ್ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್ ಮೇಲೆ ಇರುವ ಕಳಂಕವೂ ದೂರವಾಗಲಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದ್ದು, ಬಹುತೇಕ ಟೀಮ್ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ.
ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್ ಹೋಟೆಲ್ ನಿರ್ಮಿಸುವುದಾಗಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭೈ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ.