ನ್ಯೂಸ್

ಹಾರ್ನ್​ ಮಾಡಿದ್ದಕ್ಕೆ ಆಟೋ ಚಾಲಕನ ಹತ್ಯೆ

ಚೆನ್ನೈ: ಹಾರ್ನ್​​ ಮಾಡಿ ದಾರಿ ಬಿಡುವಂತೆ ಹೇಳಿದ್ದಕ್ಕೆ ಗುಂಪೊಂದು ಆಟೋ ಚಾಲಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನ ಅಂಬತ್ತೂರು ಪ್ರದೇಶದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಕಾಮೇಶ್​(25)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಈತನ ಅಣ್ಣ ಸತೀಶ್​(29) ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಅಪ್ರಾಪ್ತ ವಯಸ್ಕರರು ಸೇರಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತರು ಸೂರ್ಯ(23), ಗೌತಮ್(22),ಅಜಯ್(22), ಅಜಯ್(22), ರಿಯಾಜ್(19), ಕತಿರೇಸನ್(19), ನವೀನ್ ಕುಮಾರ್(18) ಹಾಗೂ ಇಬ್ಬರು ಅಪ್ರಾಪ್ತ ವಯಸ್ಕರರು ಎಂದು ತಿಳಿದು ಬಂದಿದೆ.

ಹಾರನ್​ ಮಾಡಿದ್ದಕ್ಕೆ ಕೊಲೆ

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಘಟನೆಯೂ ರಾತ್ರಿ 11:30ರ ಸುಮಾರಿಗೆ ನಡೆದಿದ್ದು, ಸ್ನೇಹಿತನ ಜನುಮದಿನದ ನಿಮಿತ್ತ ಗುಂಪೊಂದು ಅಂಬತ್ತೂರು ಪ್ರದೇಶದ ರಸ್ತೆಯೊಂದರಲ್ಲಿ ಕೇಕ್​ ಕಟ್​ ಮಾಡುತ್ತಿದ್ದರು. ತನ್ನ ಸಹೋದರ ಸತೀಶ್​ನನ್ನು ಅಂಬತ್ತೂರಿನಿಂದ ಓರಗಡಂ ಪ್ರದೇಶಕ್ಕೆ ಬಿಟ್ಟು ಬರಲು ಕಾಮೇಶ್​ ತನ್ನ ಆಟೋದಲ್ಲಿ ತೆರಳುತ್ತಿದ್ದ.

ಆರೋಪಿಗಳು ಅಂಬತ್ತೂರು ಪ್ರದೇಶದ ಅಯ್ಯಪ್ಪನ್​ ಸ್ಟ್ರೀಟ್​ ಜಂಕ್ಷನ್​ ಬ್ಲಾಕ್​ ಮಾಡಿ ತನ್ನ ಸ್ನೇಹಿತನೊಬ್ಬನ ಜನುಮ ದಿನವನ್ನು ಆಚರಿಸುತ್ತಿದ್ದರು. ಈ ವೇಳೆ ಕಾಮೇಶ್​ ಹಾರ್ನ್​ ಮಾಡಿದ್ದು, ಆರೋಪಿಗಳಿಗೆ ದಾರಿ ಬಿಡುವಂತೆ ಹೇಳಿದ್ದಾನೆ. ಸ್ವಲ್ಪ ಹೊತ್ತು ಕಾಯುವಂತೆ ಆರೋಪಿಗಳು ಸಂತ್ರಸ್ತನಿಗೆ ಸೂಚಿಸಿದ್ದಾರೆ.

ಗಂಭೀರ ಗಾಯ

ದಾರಿ ಬಿಡುವಂತೆ ಪುನಃ ಕೇಳಿದಾಗ ಕೆರಳಿದ ಆರೋಪಿಗಳು ಕಾಮೇಶ್​ ಹಾಗೂ ಆತನ ಅಣ್ಣನ ಮೇಲೆ ಡ್ರ್ಯಾಗರ್​ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸತೀಶ್​ ನೆರೆಹೊರೆಯವರು ಹಾಗೂ ಸಂಬಂಧಿಕರನ್ನು ಕರೆಯುವಷ್ಟರಲ್ಲೇ ಆರೋಪಿಗಳು ಕಾಮೇಶ್​ನನ್ನು ಬರ್ಬರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಸಹೋದರನನ್ನು ರಕ್ಷಿಸಲು ಮುಂದಾದ ಸತೀಶ್​ ಗಂಭೀರವಾಗಿಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್​ಶೀಟ್​ ಸಿದ್ದಪಡಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.