ಮುಂಬೈ: ನೌಕಾಪಡೆ ನಿವೃತ್ತ ಅಧಿಕಾರಿಯ ಮೇಲೆ ಶಿವಸೇನೆಯ ಸುಮಾರು 12 ಕಾರ್ಯಕರ್ತರು ತೀವ್ರ ದಾಳಿ ನಡೆಸಿದ್ದರು. ಮನೆಯಿಂದ ಹೊರಗೆ ಕಳಿದು ಹೊಡೆದ ಪರಿಣಾಮ 66 ವರ್ಷದ ನಿವೃತ್ತ ಅಧಿಕಾರಿಯ ಕಣ್ಣಿಗೆ ಗಂಭೀರ ಗಾಯವಾಗಿದೆ.
ಗಾಯಗೊಂಡ ಮದನ್ ಶರ್ಮಾ ಅವರೊಂದಿಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ಮಾತುಕತೆ ನಡೆಸಿದ್ದಾರೆ. ಇಷ್ಟೆಲ್ಲ ಆದಮೇಲೆ ಘಟನೆಗೆ ಸಂಬಂಧಪಟ್ಟಂತೆ ಶಿವಸೇನೆ ಪ್ರತಿಕ್ರಿಯೆ ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಕಾರ್ಟೂನ್ ಶೇರ್ ಮಾಡಿದ್ದಕ್ಕೆ ಉದ್ರಿಕ್ತಗೊಂಡವರು ಸ್ವಯಂ ಪ್ರೇರಣೆಯಿಂದ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಒಂಟಿ ಮನೆಯಲ್ಲಿ ಡಬಲ್ ಮರ್ಡರ್; ವೃದ್ಧ ದಂಪತಿಯ ಭೀಕರ ಹತ್ಯೆ
ಶಿವಸೇನೆ ಮುಖ್ಯಸ್ಥ, ವಕ್ತಾರ ಸಂಜಯ್ ರಾವತ್ ಅವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಕಾನೂನುಗಳನ್ನು ಕೈಗೆ ತೆಗೆದುಕೊಳ್ಳುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಇದು ಉದ್ಧವ್ ಠಾಕ್ರೆಯವರ ನೀತಿ ಎಂದು ತಿಳಿಸಿದ್ದಾರೆ.
ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ ಅವರು ಉದ್ಧವ್ ಠಾಕ್ರೆಯವರನ್ನು ಅವಹೇಳನ ಮಾಡುವಂಥ ವ್ಯಂಗ್ಯಚಿತ್ರವನ್ನು ವಾಟ್ಸ್ಆ್ಯಪ್ನಲ್ಲಿ ಫಾರ್ವಾರ್ಡ್ ಮಾಡಿದ್ದರು. ಇದರಿಂದಾಗಿ ಶಿವಸೈನಿಕರು ಸಿಟ್ಟಾಗಿ, ಸ್ವಯಂಪ್ರೇರಿತರಾಗಿ ಹಲ್ಲೆ ಮಾಡಿದ್ದಾರೆ. ದಾಳಿ ಮಾಡಿದವರನ್ನು ಆಗಲೇ ಬಂಧಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವೇದಿಕೆ ಮೇಲೆ ಸಚಿವರ ಕೂದಲು ಕತ್ತರಿಸಿದ…60,000 ರೂ.ಪಡೆದ !
ಈ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸಿದೆ. ಸಂಯಮ ಎರಡೂ ಕಡೆಯಿಂದಲೂ ಇರಬೇಕಿತ್ತು. ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಅಥವಾ ಮುಖ್ಯಮಂತ್ರಿಗಳು ಸೇರಿ ಗಣ್ಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದರೆ ಅವರ ಬೆಂಬಲಿಗರು ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)