ಟೋಕಿಯೊ: 2021ರ ಒಲಂಪಿಕ್ಸ್ ಜುಲೈನಲ್ಲಿ ಜಪಾನ್ನ ಟೊಕಿಯೋದಲ್ಲಿ ಆರಂಭವಾಗಲಿದೆ. ಕರೊನಾದ ಸಂಕಷ್ಟದ ಸಮಯದಲ್ಲಿ ಒಲಂಪಿಕ್ಸ್ ನಡೆಸುವ ಸಾಹಸಕ್ಕೆ ದೇಶ ಕೈ ಹಾಕಿದೆ. ಅನೇಕ ರೀತಿಯ ನೀತಿ ನಿಯಮಗಳೊಂದಿಗೆ ಈ ಒಲಂಪಿಕ್ಸ್ ನಡೆಯಲಿದ್ದು, ಸ್ಪರ್ಧಾಳುಗಳಿಗೂ ಅನೇಕ ಕಟ್ಟುಪಾಡನ್ನು ಹಾಕಲಾಗಿದೆ.
ಅಂದ ಹಾಗೆ ಪ್ರತಿ ವರ್ಷ ಒಲಂಪಿಕ್ಸ್ಗೆ ಬರುವ ಸ್ಪರ್ಧಾಳುಗಳಿಗೆ ಉಚಿತವಾಗಿ ಕಾಂಡೋಮ್ ನೀಡಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಕಾಂಡೋಮ್ಗಳು ಈ ಒಂದೇ ಕ್ರೀಡಾಕೂಟದಲ್ಲಿ ಬಳಕೆಯಾಗುತ್ತದೆಯಂತೆ. ಆದರೆ ಈ ವರ್ಷ ಈ ಯೋಜನೆಗೂ ಒಂದು ರೀತಿಯಲ್ಲಿ ಕಲ್ಲು ಬಿದ್ದಿದೆ ಎನ್ನಬಹುದು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಉಚಿತ ಕಾಂಡೋಮ್ ವಿತರಣೆಯಾಗುತ್ತದೆ. ಸುಮಾರು 1.6 ಲಕ್ಷ ಕಾಂಡೋಮ್ ಅನ್ನು ವಿತರಣೆ ಮಾಡಲಾಗುವುದು. ಆದರೆ ಈ ಸಮಯದಲ್ಲಿ ದೈಹಿಕ ಅಂತರ ಅತಿಮುಖ್ಯವಾಗಿರುವುದರಿಂದಾಗಿ ಕಾಂಡೋಮ್ ಅನ್ನು ಯಾರೋ ಅಲ್ಲಿ ಬಳಸುವಂತಿಲ್ಲ. ಸ್ಪರ್ಧಾಳುಗಳು ತಮ್ಮ ದೇಶಕ್ಕೆ ವಾಪಸಾದ ನಂತರ ಅದರ ಬಳಕೆ ಮಾಡಿಕೊಳ್ಳಬಹುದು ಎಂದು ಆಡಳಿತ ಹೇಳಿದೆ.
ಏಡ್ಸ್ ತಡೆಯುವ ನಿಟ್ಟಿನಲ್ಲಿ ಹಾಗೂ ಸೇಫ್ ಸೆಕ್ಸ್ ದೃಷ್ಟಿಯಿಂದಾಗಿ ಒಲಂಪಿಕ್ಸ್ನಲ್ಲಿಯೂ ಕಾಂಡೋಮ್ ವಿತರಣೆ ಮಾಡುವ ಕೆಲಸವನ್ನು 1988ರಲ್ಲಿ ಆರಂಭಿಸಲಾಯಿತು. ಈವರೆಗೆ ಲಕ್ಷಾಂತರ ಕಾಂಡೋಮ್ ವಿತರಣೆ ಮಾಡಲಾಗಿದೆ. ರಿಯೋ ಒಲಂಪಿಕ್ಸ್ನಲ್ಲಿ ಅತಿ ಹೆಚ್ಚು ಅಂದರೆ 4.5 ಲಕ್ಷ ಕಾಂಡೋಮ್ ವಿತರಣೆ ಮಾಡಲಾಗಿತ್ತು. (ಏಜೆನ್ಸೀಸ್)