ನ್ಯೂಸ್

ಮತದಾರರ ಮೇಲೆ ಯೋಧರ ಹಲ್ಲೆ?; ಮತದಾನವೇ ಸ್ಥಗಿತ!

ಕೊಡಗು: ಮತದಾರರ ಮೇಲೆ ಯೋಧರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಮತದಾನವೇ ಸ್ಥಗಿತಗೊಂಡ ಪ್ರಕರಣ ನಡೆದಿದೆ. ಸೇನೆಯವರನ್ನು ಹೊರಗೆ ಕಳುಹಿಸುವಂತೆ ಮತದಾರರು ಪಟ್ಟುಹಿಡಿದಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ಮಾದಾಪುರ ಶಾಲೆಯಲ್ಲಿನ 119ನೇ ಮತಗಟ್ಟೆಯಲ್ಲಿ ಈ ಪ್ರಕರಣ ನಡೆದಿದೆ. ಯೋಧರ ನಡೆ ವಿರುದ್ಧ 700ಕ್ಕೂ ಹೆಚ್ಚು ಮತದಾರರು ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಒಂದು ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ.

ಯೋಧರು ಏಕಾಏಕಿ ಮತದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸೇನೆಯವರನ್ನು ಹೊರಗೆ ಕಳುಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಮತದಾನ ಸ್ಥಗಿತಗೊಂಡಿರುವುದರಿಂದ ಸರಿಯಾದ ಸಮಯಕ್ಕೆ ಮತದಾನ ಪ್ರಕ್ರಿಯೆ ಮುಗಿಯುವುದು ಕೂಡ ಅನುಮಾನ ಎಂಬಂತಾಗಿದೆ.