ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಗಡಿಯಾಚೆಗಿನ ಪ್ರೇಮ ಪ್ರಕರಣಗಳದ್ದೇ ಭಾರೀ ಸುದ್ದಿಯಾಗಿದೆ. ಸೀಮಾ ಹೈದರ್ ಎಂಬಾಕೆ ಪಾಕಿಸ್ತಾನದಿಂದ ಪಬ್ಜಿ ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಅಕ್ರಮವಾಗಿ ಬಂದು ಮದುವೆಯಾಗಿದ್ದರೆ, ರಾಜಸ್ಥಾನ ಮೂಲದ ಅಂಜು (ಈಗ ಫಾತಿಮಾ) ಎಂಬಾಕೆ ಫೇಸ್ಬುಕ್ ಫ್ರೆಂಡ್ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗಿ ಆತನನ್ನು ಮದುವೆ ಆಗಿದ್ದಾಳೆ.
ಈ ಪ್ರಕರಣಗಳನ್ನು ಭಾರೀ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲೂ ಇದು ಭಾರೀ ಚರ್ಚೆಯಾಗುತ್ತಿದೆ. ಇದರ ನಡುವೆ ವರದಿಗಾರ್ತಿಯೊಬ್ಬಳು ಅಂಜುವಿನ ಪತಿ ಅರವಿಂದ್ನನ್ನು ಸಂದರ್ಶನ ಮಾಡಿದ್ದು, ಅದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ವರದಿಗಾರ್ತಿ ಮಾಡಿರುವ ಎಡವಟ್ಟಿಗೆ ಅರವಿಂದ್ ನೀಡಿರುವ ಪ್ರತಿಕ್ರಿಯೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ವಿಡಿಯೋದಲ್ಲಿ ವರದಿಗಾರ್ತಿ ಅಂಜು ಹೆಸರು ಹೇಳಲು ಹೋಗಿ ಸೀಮಾ ಎಂದು ಹೇಳುತ್ತಾಳೆ. ಸದ್ಯ ದೇಶದಲ್ಲಿ ಈ ಎರಡು ಹೆಸರು ತುಂಬಾ ಚಾಲ್ತಿಯಲ್ಲಿರುವುದರಿಂದ ವರದಿಗಾರ್ತಿಯು ಗೊಂದಲಕ್ಕೀಡಾಗಿ ಅಂಜು ಬದಲು ಸೀಮಾ ಹೆಸರನ್ನು ಕೇಳಿಬಿಟ್ಟಿದ್ದಾಳೆ. ಅದು ಕೂಡ ಲೈವ್ನಲ್ಲೇ. ಇದೀಗ ಆ ವಿಡಿಯೋ ತುಣುಕು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಾಗಾದ್ರೆ ವರದಿಗಾರ್ತಿ ಕೇಳಿದ್ದೇನು ಅಂತಾ ನೋಡುವುದಾದರೆ, ನೀವು ಇತ್ತೀಚೆಗೆ ಸೀಮಾಳ ಜತೆ ಮಾತನಾಡಿದ್ರಾ? ಎಂದು ಪ್ರಶ್ನಿಸಿದ್ದಾಳೆ. ಆದರೆ, ಸೀಮಾಗೂ ಅರವಿಂದ್ಗೂ ಸಂಬಂಧವೇ ಇಲ್ಲ. ಇದರಿಂದ ಗೊಂದಲಕ್ಕೆ ಒಳಗಾಗುವ ಅರವಿಂದ್, ವರದಿಗಾರ್ತಿಯ ಕಡೆ ನೋಡಿ ವಿಚಿತ್ರ ಪ್ರತಿಕ್ರಿಯೆ ನೀಡುತ್ತಾನೆ. ಆ ಬಳಿಕ ತನ್ನ ಪ್ರಮಾದವನ್ನು ಅರಿತ ವರದಿಗಾರ್ತಿ ಮತ್ತೆ ಅಂಜು ಜತೆ ಮಾತನಾಡಿದ್ರಾ ಎಂದು ಕೇಳುತ್ತಾಳೆ. ಬಳಿಕ ಅರವಿಂದ್ ಇಲ್ಲ ಎಂದು ಉತ್ತರ ನೀಡುತ್ತಾನೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ವಿಡಿಯೋ ನೋಡಿ ನಗೆಗಡಲಲ್ಲಿ ತೇಲಿರುವ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ಗಳ ಮೂಲಕ ವರದಿಗಾರ್ತಿಯ ಕಾಲೆಳೆಯುತ್ತಿದ್ದಾರೆ. (ಏಜೆನ್ಸೀಸ್)