ನ್ಯೂಸ್

ಫ್ರೆಂಡ್​​ ಮುಂದೆಯೇ ಗ್ಯಾಂಗ್​ರೇಪ್​: ಘಟನೆ ನಡೆದ 22 ವರ್ಷದ ಬಳಿಕ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ಹೇಗೆ?

ಭುವನೇಶ್ವರ್​: ಒಡಿಶಾ ರಾಜಧಾನಿ ಭುವನೇಶ್ವರ್​ನ ಪೊಲೀಸ್​ ಆಯುಕ್ತರಾದ ಸುಧಾನ್ಶು ಸಾರಂಗಿ ಅವರು ಬೆರ್ಹಾಂಪುರ್​ ಪೊಲೀಸ್​ ವರಿಷ್ಠಾಧಿಕಾರಿ ಆಗಿದ್ದಂತಹ ಸಂದರ್ಭದಲ್ಲಿ ಅಂದ್ರೆ 1999ರಲ್ಲಿ ನಡೆದಿದ್ದ ಅಂಜನಾ ಮಿಶ್ರಾ ಎಂಬಾಕೆ ಮೇಲಿನ ಗ್ಯಾಂಗ್​ರೇಪ್​ ಪ್ರಕರಣದ ಮರುತನಿಖೆ ನಡೆಸಿ ಕೊನೆಗೂ 22 ವರ್ಷಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವ ಮೂಲಕ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೊನೆಗೂ ನ್ಯಾಯ ದೊರಕಿಸಿಕೊಟ್ಟಿದ್ದಕ್ಕೆ ಪ್ರಕರಣದ ಸಂತ್ರಸ್ತೆಯು ಸಹ ಪೊಲೀಸ್​ ಆಯುಕ್ತರು ಮತ್ತು ಅವರ ತಂಡಕ್ಕೂ ಧನ್ಯವಾದ ಹೇಳಿದ್ದಾರೆ.

ಇನ್ನು ಪೊಲೀಸ್​ ಕಾರ್ಯಾಚರಣೆ ಕುರಿತು ಮಾತನಾಡಿರುವ ಪೊಲೀಸ್​ ಆಯುಕ್ತರು, ಮೂವರು ಆರೋಪಿಗಳಲ್ಲಿ ಒಬ್ಬರಾದ ಧೀರೇಂದ್ರನನ್ನು ಕಳೆದ ಮೂರು ತಿಂಗಳ ಹಿಂದೆ ಚೌದ್ವಾರ್​ ಜೈಲಿನಲ್ಲಿ ಭೇಟಿ ಮಾಡಿದ್ದೆ. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಬಗ್ಗೆ ತಿಳಿದುಕೊಂಡಿದ್ದೆ. ಜೈಲಿನಿಂದ ಮರಳಿ ಬಂದಾಗ ಪ್ರಕರಣದ ಹಳೆಯ ಕಡತಗಳನ್ನು ನಾನು ಸಂಗ್ರಹಿಸಿದೆ. ಮಹಿಳೆ ಮೇಲೆ ಎಸಗಿದ ದೌರ್ಜನ್ಯ ತಿಳಿದು ನನಗೆ ಆಘಾತವಾಯಿತು.

ಪ್ರಕರಣ ಪ್ರಮುಖ ಆರೋಪಿ ಬಿಬನ್​ ಬಿಸ್ವಾಲ್​ ಅತ್ಯಾಚಾರ ನಡೆದ ದಿನದಂದು ಮೊದಲು ಮಹಿಳೆಯ ವಾಹನವನ್ನು ಅಡ್ಡಗಟ್ಟಿ, ಗನ್​ಪಾಯಿಂಟ್​ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ಆದರೆ, ಆತನನ್ನು ಈವರೆಗೂ ಬಂಧಿಸಿರಲಿಲ್ಲ. 2010ರ ಒಡಿಶಾ ಹೈಕೋರ್ಟ್​ ಆದೇಶದಲ್ಲೂ ಪ್ರಮುಖ ಆರೋಪಿಯನ್ನು ಬಂಧಿಸದಿರುವುದರ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಸುಧಾನ್ಶು ಸಾರಂಗಿ ಹೇಳಿದ್ದಾರೆ.

ನಾನು ಗಮನಿಸಿದಂತೆ ತಲೆಮರೆಸಿಕೊಂಡಿದ್ದ ಬಿಬನ್​ನನ್ನು ಬಿಕೆ (ಬಾರಂಗ ಕಿಂಗ್​) ಎಂದು ಕರೆಯಲಾಗುತ್ತಿತ್ತು. ಈ ಹಿಂದೆ ಅವನನ್ನು ಬಂಗಾರ ಕಿಂಗ್​ ಎಂದು ಕರೆಯಲ್ಪಡುತ್ತಿದ್ದರೆ ಅವನ ಮೂಲ ಸ್ಥಳದ ಸಂಪರ್ಕ ಇಟ್ಟುಕೊಂಡಿರುತ್ತಾನೆಂಬ ವಿಚಾರ ಓರ್ವ ಮನೋವಿಜ್ಞಾನ ವಿದ್ಯಾರ್ಥಿಯಾಗಿ ನನ್ನ ತಲೆಯಲ್ಲಿ ಸದಾ ಕೊರೆಯುತ್ತಿತ್ತು. ತದನಂತರದ ತನಿಖೆಯ ವೇಳೆ ಬಿಬನ್​ ಮಗ ಯಾವುದೋ ಗೊತ್ತಿಲ್ಲದ ಮೂಲದಿಂದ ಹಣ ಪಡೆಯುತ್ತಿದ್ದಾನೆ ಎಂಬ ವಿಷಯ ಗಮನಕ್ಕೆ ಬಂತು. ಇದರಿಂದ ನಮ್ಮ ರಹಸ್ಯ ಕಾರ್ಯಾಚರಣೆ (ಸೈಲೆನ್ಸ್​ ವೈಪರ್​)ಗೆ ಮತ್ತಷ್ಟು ಬಲಬಂದಿತು.

ಇದರ ನಡುವೆ ಬಿಬನ್​ ಕುಟುಂಬ ಆತನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ಯತ್ನಿಸುತ್ತಿದೆ ಎಂಬ ವಿಚಾರ ಗೊತ್ತಾಯಿತು. ಇದು ಆತ ಇನ್ನು ಬದುಕಿದ್ದಾನೆಂಬ ನಂಬಿಕೆಯನ್ನು ಹೆಚ್ಚು ಮಾಡಿತು. ಕೆಲ ಸಮಯ ಆತ ತ್ರಿಶುಲಿಯಾ ಏರಿಯಾದಲ್ಲಿ ಬಂದು ನೆಲೆಸಿದ್ದ ಎಂಬ ವಿಚಾರ ತಿಳಿಯಿತು. ಅಲ್ಲದೆ, ಈ ಸಂಬಂಧ ಕೆಲವು ತಪ್ಪು ಮಾಹಿತಿಯನ್ನೂ ಸಹ ಪಡೆದೆವು. ಆದರೆ, ನಮ್ಮ ತಂಡ ಮೂರು ತಿಂಗಳ ಕಾಲ ತುಂಬಾ ಶ್ರಮವಹಿಸಿ ಆತ ಎಲ್ಲಿದ್ದಾನೆಂಬ ಮಾಹಿತಿಯನ್ನು ಪತ್ತೆಹಚ್ಚಿತು.

ಒಡಿಶಾದ ಪ್ರಕರಣ ಅಲ್ಲಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಯಿತು. ಲೋನಾವಾಲಾದಲ್ಲಿರುವ ಆ್ಯಂಬಿ ವ್ಯಾಲಿಯಲ್ಲಿ ಜಲಂದರ್​ ಸ್ವೈನ್​ ಎಂಬಾತ ಪ್ಲಂಬರ್​ ಆಗಿ ಕೆಲಸ ಮಾಡುತ್ತಿರುವುದು ತಿಳಿಯಿತು. ಆ ಸ್ಥಳದ ಬ್ಯಾಂಕ್​ ಖಾತೆ ಮತ್ತು ಆಧಾರ್​ ಕಾರ್ಡ್​ ಸಹ ಹೊಂದಿದ್ದನು. ಆದರೆ, ಆತ ತನ್ನ ಖಾಯಂ ವಿಳಾಸವನ್ನಾಗಿ ನಾರಾಣ್ಪುರ್​ (ಕಟಕ್​) ಅನ್ನು ಉಲ್ಲೇಖಿಸಿದ್ದ. ಇದು ಆರೋಪಿ ಬಿಬನ್​ ತವರು ಸಹ ಹೌದು. ಇದೇ ಮಾಹಿತಿ ಪಡೆದುಕೊಂಡು ಜಲಂದರ್​ ಹೆಸರಿನವರು ನಾರಾಣ್ಪುರ್​ನಲ್ಲಿ ಯಾರಾದರೂ ಇದಾರಾ ಎಂದು ವಿಚಾರಿಸಿದಾಗ ಅಂಥವರು ಯಾರು ಇರಲಿಲ್ಲ. ಇದೇ ಆಧಾರದ ಮೇಲೆ ಮಹಾರಾಷ್ಟ್ರ ಪೊಲೀಸರ ಜತೆಗೆ ಜಂಟಿ ತಂಡವನ್ನು ರಚಿಸಿ ಆ್ಯಂಬಿ ವ್ಯಾಲಿಯಲ್ಲಿ ಆರೋಪಿಯನ್ನು ಬಂಧಿಸಿದೆವು ಎಂದು ಸುಧಾನ್ಶು ಸಾರಂಗಿ ಮಾಹಿತಿ ನೀಡಿದರು.

ಶೋಧ ಕಾರ್ಯಾಚರಣೆ ವೇಳೆ ಪತ್ನಿ ಮತ್ತು ಮಕ್ಕಳಿಬ್ಬರ ಆಧಾರ್​ ಕಾರ್ಡ್​ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಆಯುಕ್ತರು ಹೇಳಿದರು.

ಪ್ರಕರಣ ಹಿನ್ನೆಲೆ ಏನು?

ಅಂಜನಾ ಮಿಶ್ರಾ ಅತ್ಯಾಚಾರ ಪ್ರಕರಣ ಒಂದು ಹೈಪ್ರೊಫೈಲ್​ ಕೇಸ್​. ಇದು 1999ರಲ್ಲಿ ನಡೆಯಿತು. ಸಂತ್ರಸ್ತೆ ಅಂಜನಾ ಮಿಶ್ರಾ ಭಾರತೀಯ ಅರಣ್ಯಾಧಿಕಾರಿ ಸುಬಾಷ್​ ಚಂದ್ರ ಮಿಶ್ರಾರ ಮಾಜಿ ಪತ್ನಿ. 1999ರ ಜನವರಿ 9ರಂದು ಆಕೆಯ ಮೇಲೆ ಗ್ಯಾಂಗ್​ರೇಪ್​ ನಡೆದಿತ್ತು. ಇದಾದ ಬಳಿಕ ಅಂಜನಾ ಆಗಿನ ಸಿಂ ಜೆ.ಬಿ. ಪಟ್ನಾಯಕ್​ ಮತ್ತು ಅವರ ಸ್ನೇಹಿತ ಮಾಜಿ ಅಡ್ವೋಕೆಟ್​ ಜನರಲ್​ ಇಂದ್ರಜಿತ್​ ರಾಯ್​ ವಿರುದ್ಧ ಆರೋಪಿಸಿದ್ದರು. ಪಕ್ಷಕ್ಕೆ ಧಕ್ಕೆ ತರುತ್ತದೆ ಎಂಬ ಉದ್ದೇಶದಿಂದ ಆಗಿನ ಕಾಂಗ್ರೆಸ್​ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಪಟ್ನಾಯಕ್​ರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಗಿರಿಧರ್​ ಗಮಂಗ್​ರನ್ನು ನೇಮಿಸಿದ್ದರು.

ಜನವರಿ 9ರಂದು ಅಂಜನಾ ತಮ್ಮ ಜರ್ನಲಿಸ್ಟ್​ ಫ್ರೆಂಡ್​ ಜತೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಭುವನೇಶ್ವರ್​ ಹೊರವಲಯದ ಬಾರಂಗ್​ ಬಳಿ ನಿರ್ಜನ ಪ್ರದೇಶದಲ್ಲಿ ಕಾರು ಅಡ್ಡಹಾಕಲಾಯಿತು. ಈ ವೇಳೆ ಮೂವರು ಆರೋಪಿಗಳು ಫ್ರೆಂಡ್​ ಮುಂದೆಯೇ ಅಂಜನಾ ಮೇಲೆ ಗ್ಯಾಂಗ್​ರೇಪ್​ ಮಾಡಿದ್ದರು. ಇಬ್ಬರು ಆರೋಪಿಗಳನ್ನು 1999ರ ಜನವರಿ 26ರಂದೇ ಬಂಧಿಸಿದ್ದರು. ಆದರೆ, ಪರಾರಿಯಾಗಿದ್ದ ಮೂರನೇ ಹಾಗೂ ಪ್ರಮುಖ ಆರೋಪಿ ಬಿಬನ್​ ಬಿಸ್ವಾಲ್​ನನ್ನು 22 ವರ್ಷಗಳ ಬಳಿಕ ಫೆ. 22ರಂದು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ