ನ್ಯೂಸ್

ಸಂಪಾದಕೀಯ| ಆತಂಕಕಾರಿ ಪಿಡುಗು

Webdesk - Manjunatha B

ರಾಜ್ಯ ಪೊಲೀಸರು ಎರಡು ಜಾಲಗಳನ್ನು ಭೇದಿಸಿ, ಮಹತ್ವದ ಯಶಸ್ಸು ದಾಖಲಿಸಿದ್ದಾರೆ. ಅನೇಕ ಆತಂಕಕಾರಿ ಸಂಗತಿಗಳು ಮತ್ತು ಕಳವಳದ ವಿಷಯಗಳು ಈ ವೇಳೆ ಬಹಿರಂಗಗೊಂಡಿವೆ. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಬಹಿರಂಗಗೊಂಡು ತಲ್ಲಣಕ್ಕೆ ಕಾರಣವಾಗಿದೆ. ಕೆಲ ವೈದ್ಯರೇ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಗೆ ಸಹಕರಿಸುತ್ತಿರುವ ಸಂಗತಿ ನಿಜಕ್ಕೂ ಆತಂಕಕಾರಿ. ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿರುವುದರ ಜತೆಗೆ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಅವಕಾಶವನ್ನು ಕಾನೂನು ನೀಡಿದೆ. ಆದರೂ, ಇಂಥ ಪ್ರಕರಣಗಳು ವರದಿ ಆಗುತ್ತಿರುವುದು ಮತ್ತು ವಿದ್ಯಾವಂತರೆನಿಸಿಕೊಂಡವರೇ ಭಾಗಿಯಾಗುತ್ತಿರುವುದು ದುರ್ದೈವದ ಸಂಗತಿ.

ಈ ಪ್ರಕರಣದ ಬೆನ್ನಲ್ಲೇ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ವ್ಯಾಪಿಸಿರುವ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಮಹಿಳೆಯರೇ ತಂಡ ರಚಿಸಿಕೊಂಡು ಮಕ್ಕಳಾಗದ ದಂಪತಿಯನ್ನು ಗುರುತಿಸಿ ಅವರಿಗೆ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಏಳು ಮಹಿಳೆಯರು ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ. 10 ಮಕ್ಕಳನ್ನು ಮಾರಾಟ ಮಾಡಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿಷ್ಠಿತ ಆಸ್ಪತ್ರೆಗಳು ಮತ್ತು ವೈದ್ಯರು ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಭ್ರೂಣ ಪತ್ತೆ ಮತ್ತು ಮಕ್ಕಳ ಮಾರಾಟ, ಈ ಎರಡೂ ಜಾಲಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಕಂಟಕವೇ ಸರಿ. ಆತಂಕದ ಸಂಗತಿ ಎಂದರೆ, ಈ ಪಿಡುಗು ಕರ್ನಾಟಕ ಅಥವಾ ನೆರೆಯ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಬಗೆಯ ಕೃತ್ಯಗಳು ಕಾನೂನಿನ ಕಣ್ಣು ತಪ್ಪಿಸಿ ಸದ್ದಿಲ್ಲದೆ ನಡೆಯುತ್ತಿವೆ. ಬಾಡಿಗೆ ತಾಯ್ತನದ ಹೆಸರಿನಲ್ಲೂ ಮಕ್ಕಳ ಮಾರಾಟದ ದಂಧೆ ನಡೆಯುತ್ತಿದೆ. ಆರೋಪಿಗಳ ವಿಚಾರಣೆಯಿಂದ ಮತ್ತಷ್ಟು ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಅದೇನಿದ್ದರೂ, ರಾಜ್ಯ ಪೊಲೀಸರ ಈ ಕಾರ್ಯಾಚರಣೆ ಶ್ಲಾಘನಾರ್ಹ ಮತ್ತು ಸಮಾಜದ ಕಣ್ಣು ತೆರೆಸುವಂಥದ್ದು.

ಶಿಶುಗಳ ಲಿಂಗ ಹಾಗೂ ಬಣ್ಣ ನೋಡಿ 1 ರಿಂದ 2 ಲಕ್ಷ ರೂ. ಕೊಡುತ್ತಿದ್ದ ಆರೋಪಿಗಳು, ಆನಂತರ ಆ ಶಿಶುವಿಗೆ ಬೆಲೆ ನಿಗದಿ ಮಾಡುತ್ತಿದ್ದರು. ಗಂಡು ಶಿಶುವಿಗೆ 8 ರಿಂದ 10 ಲಕ್ಷ ರೂ., ಹೆಣ್ಣು ಶಿಶುವಿಗೆ 5ರಿಂದ 6 ಲಕ್ಷ ರೂ. ನಿಗದಿ ಮಾಡಿ ಮಾರಾಟ ಮಾಡುತ್ತಿದ್ದರು. ಕರ್ನಾಟಕದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವ ವೈದ್ಯರು ಮತ್ತು ಆಸ್ಪತ್ರೆಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿರುವುದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಕರಾಳ ಸತ್ಯಗಳು ಆಚೆ ಬರುವ ನಿರೀಕ್ಷೆ ಇದೆ.

ಇಂಥ ಪಿಡುಗುಗಳನ್ನು ಸೋಲಿಸಲು ಪೊಲೀಸ್ ಬಲವೊಂದಿದ್ದರೆ ಸಾಕಾಗುವುದಿಲ್ಲ. ವ್ಯವಸ್ಥೆಯ ಶುದ್ಧೀಕರಣಕ್ಕೆ ಸಮಾಜವೂ ಕೈಜೋಡಿಸುವುದು ಅಗತ್ಯ. ಸಾರ್ವಜನಿಕರ ಮೇಲೂ ಅಷ್ಟೇ ಜವಾಬ್ದಾರಿ ಇದ್ದು, ತಮ್ಮ ಸುತ್ತಮುತ್ತ ಇಂಥ ಪ್ರಕರಣಗಳನ್ನು ಗಮನಿಸಿದರೆ ಕೂಡಲೇ ಆ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಈ ಬಗೆಯ ಜಾಲಗಳನ್ನು ಕತ್ತರಿಸಲು ಸಹಕರಿಸಬೇಕು.