ನ್ಯೂಸ್

ಮಂಗಳವಾರ ಶಾಲಾ- ಕಾಲೇಜು ಓಪನ್​; ವಿದ್ಯಾರ್ಥಿಗಳಿಗೆ ತರಬೇತಿ, ಸಿದ್ಧತೆ ಪೂರ್ಣಗೊಂಡಿರೋದೆಲ್ಲಿ ?

ದೇಶದಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಸಪ್ಟೆಂಬರ್​ 1ರಿಂದ ಹೊಸ ಅನ್​ಲಾಕ್​ 4.0 ಘೋಷಿಸಲಿದೆ. ಮೆಟ್ರೋಗೆ ಹಸಿರು ನಿಶಾನೆ ಸಿಗುವ ಸಾಧ್ಯತೆಗಳಿದ್ದು, ಶಾಲಾ- ಕಾಲೇಜುಗಳ ಪುನಾರಂಭದ ಬಗ್ಗೆ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.

ಜಗತ್ತಿನ ಹಲವೆಡೆ ಕೆಲ ನಿರ್ಬಂಧಗಳೊಂದಿಗೆ ಶಿಕ್ಷಣ ಸಂಸ್ಥೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ. ಶ್ರೀಲಂಕಾದಲ್ಲಿ ಶಾಲಾ- ಕಾಲೇಜು ಆರಂಭವಾಗಿದ್ದರೆ, ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧ ಜಾರಿಯಲ್ಲಿಲ್ಲ.

ಕರ್ನಾಟಕದಲ್ಲೂ ಪದವಿ ಕೋರ್ಸ್​ಗಳ ಆನ್​ಲೈನ್​ ಕ್ಲಾಸ್​ ಮಂಗಳವಾರದಿಂದ ಆರಂಭವಾಗಲಿದ್ದರೆ, ಅಕ್ಟೋಬರ್​ನಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.

ಈ ನಡುವೆ, ಕೊರೊನಾ ಜನ್ಮಸ್ಥಾನವಾದ ಚೀನಾದ ವುಹಾನ್​ನಲ್ಲಿ ಶಿಶುವಿಹಾರಗಳು ಸೇರಿ ಎಲ್ಲ ಶಾಲಾ- ಕಾಲೇಜುಗಳು ಮಂಗಳವಾರದಿಂದ ಪುನರಾರಂಭವಾಗಲಿವೆ.

ನಗರದಲ್ಲಿರುವ 2,842 ಶಿಕ್ಷಣ ಸಂಸ್ಥೆಗಳು ಮತ್ತೆ ಆರಂಭವಾಗಲಿದ್ದು, 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜುಗಳ ಬಾಗಿಲು ತೆರೆಯಲಾಗುವುದು ಎಂದು ವುಹಾನ್​ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ವುಹಾನ್​ ವಿಶ್ವ ವಿದ್ಯಾಲಯ ಕೂಡ ಸೋಮವಾರ ಆರಂಭವಾಗಲಿದೆ.

ಸಂಸ್ಥೆಗಳು ಸಾಂಕ್ರಾಮಿಕ ಕಾಯಿಲೆ ತಡೆಯಲು ಬೇಕಾದ ಸಾಧನಗಳನ್ನು ಹೊಂದಿರಬೇಕು. ಹೊಸದಾಗಿ ಕರೊನಾ ಕಾಣಿಸಿಕೊಂಡರೆ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಅನಗತ್ಯವಾಗಿ ಗುಂಪು ಸೇರುವುದನ್ನು ತಡೆಯಬೇಕು ಹಾಗೂ ದಿನವೂ ಆರೋಗ್ಯ ಇಲಾಕೆಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ವಿದೇಶಿ ವಿದ್ಯಾರ್ಥಿಗಳು ಹಾಗೂ ಬೋಧಕರು ಆಯಾ ಸಂಸ್ಥೆಗಳಿಂದ ಸೂಚನೆ ದೊರೆಯದಿದ್ದಲ್ಲಿ ಆಗಮಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.