

ಏಲಾನ್ ಮಸ್ಕ್...! ಸದ್ಯ ತಾಂತ್ರಿಕ, ಬಾಹ್ಯಾಕಾಶ ಸಂಶೋಧನೆ ಹಾಗೂ ವೈಜ್ಞಾನಿಕ ರಂಗದಲ್ಲಿ ಉತ್ತುಂಗದಲ್ಲಿರುವ ಹೆಸರು.
ಅಮೆರಿಕದ ಬಾಹ್ಯಾಕಾಶ ಯಾನಿಗಳನ್ನು ತನ್ನದೇ ಸ್ಪೇಸ್ ಎಕ್ಸ್ ಕಂಪನಿ ತಯಾರಿಸಿದ್ದ ನೌಕೆಯಲ್ಲಿ ಕಳುಹಿಸಿದ್ದ ಮಸ್ಕ್, ಇದಾದ ಬಳಿಕ ಈತನದ್ದೇ ಟೆಸ್ಲಾ ಕಂಪನಿ ಒಂದೇ ಚಾರ್ಜ್ನಲ್ಲಿ ಸಾವಿರಾರು ಕಿ.ಮೀ. ದೂರದವರೆಗೆ ಸಂಚರಿಸುವ ವಿದ್ಯುತ್ ಚಾಲಿತ ಕಾರಿನ ಬ್ಯಾಟರಿ ತಯಾರಿಸಿತ್ತು.
ಇದೀಗ, ಇದೇ ಮಸ್ಕ್ ಒಡೆತನದ ನ್ಯೂರಾಲಿಂಕ್ ಕಂಪನಿ ಮತ್ತೊಂದು ಪವಾಡವನ್ನೇ ಮಾಡಿದೆ. ಮನಸ್ಸಿನ ಭಾವಗಳ ಮೂಲಕ ಕಂಪ್ಯೂಟರ್ ನಿಯಂತ್ರಿಸಬಲ್ಲ ಕಂಪ್ಯೂಟರ್ ಚಿಪ್ವೊಂದನ್ನು ಕಂಡುಹಿಡಿದಿದ್ದಾರೆ. ಇದಕ್ಕೆ ಫಿಟ್ಬಿಟ್ ಎಮದು ಹೆಸರಿಸಲಾಗಿದೆ. ಅದನ್ನು ಹಂದಿಗೆ ಯಶಸ್ವಿಯಾಗಿ ಅಳವಡಿಸಿದ್ದಾರೆ.
ಎಲಾನ್ ಮಸ್ಕ್ ಈ ಹಂದಿಯನ್ನು ಜಗತ್ತಿನೆದುರು ಪ್ರದರ್ಶಿಸಿದ್ದಾರೆ. ಈ ಹಂದಿಗೆ ಗೆಟ್ರುಡ್ ಎಂದು ಹೆಸರಿಸಲಾಗಿದೆ. ಕಂಪ್ಯೂಟರ್ ಚಿಪ್ ಬಗ್ಗೆ ಮಾಹಿತಿ ನೀಡಿದ ಎಲಾನ್ ಮಸ್ಕ್, ಚಿಪ್ ಅಳವಡಿಸಿದ ಹಂದಿಯ ದೃಶ್ಯಗಳನ್ನು ತೋರಿಸಿದ್ದಾರೆ. ಚಿಕ್ಕ ನಾಣ್ಯದ ಗಾತ್ರದ, ಅತಿ ಚಿಕ್ಕ ವೈರ್ಗಳನ್ನು ಹೊಂದಿದ್ದ ಚಿಪ್ಅನ್ನು ಇದಕ್ಕೆ ಎರಡು ತಿಂಗಳ ಕಾಲ ಅಳವಡಿಸಲಾಗಿತ್ತು ಎಂದು ಹೇಳಿದ್ದಾರೆ.
ನ್ಯೂರಾಲಿಂಕ್ ಕಂಪನಿಯನ್ನು 2016ರಲ್ಲಿ ಸ್ಥಾಪಿಸಲಾಗಿದ್ದು, ಮಿದುಳಿಗೂ ಯಂತ್ರಕ್ಕೂ ವೈರ್ಗಳಿಲ್ಲದೇ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಚಿಪ್ ಅಳವಡಿಸಿಕೊಂಡು ಜನರು ತಮ್ಮ ನೆನಪುಗಳನ್ನು ಕಾಪಾಡಿಕೊಳ್ಳುವುದಲ್ಲದೇ, ಮರುಕಳಿಸಿಕೊಳ್ಳಬಹುದು ಎಂದು ಮಸ್ಕ್ ಮಾಹಿತಿ ನೀಡಿದ್ದಾರೆ.
ಕಳೆದ ಜುಲೈನಲ್ಲಿ ಕಿವಿಯ ಹಿಂಭಾಗದಲ್ಲಿ ಮಿದುಳಿಗೆ ಜೋಡಿಸುವ ಚಿಕ್ಕವೈರ್ಗಳಿದ್ದ ಸಾಧನವನ್ನು ಹಾಗೂ ಇನ್ನೊಂದು ಉಪಕರಣವನ್ನು ಅನಾವರಣಗೊಳಿಸಿತ್ತು. ಈ ಬಾರಿ ಅದಕ್ಕಿಂತಲೂ ಚಿಕ್ಕ ಸಾಧನ ಬಿಡುಗಡೆ ಮಾಡಿದೆ. ಇದಕ್ಕೆ ಕಿವಿಯ ಹೊರಭಾಗದಲ್ಲಿ ಇನ್ನೊಂದು ಸಾಧನ ಜೋಡಿಸುವ ಅವಶ್ಯಕತೆ ಇಲ್ಲವೆಂದು ಹೇಳಿದೆ.
ಶೀಘ್ರದಲ್ಲಿಯೇ ಕಂಪ್ಯೂಟರ್ ಚಿಪ್ಅನ್ನು ಮಾನವರ ಮಿದುಳಿಗೂ ಅಳವಡಿಸಲಾಗುತ್ತದೆ. ಇದಕ್ಕಾಗಿ ಆಸಕ್ತರ ಹುಡುಕಾಡದಲ್ಲಿದೆ ನ್ಯೂರಾಲಿಂಕ್ ಕಂಪನಿ.