ನ್ಯೂಸ್

ಮತ್ತೊಬ್ಬರ ನೋವು ಅರ್ಥವಾಗದ ಆದಿತ್ಯಾನಾಥ ನಿಜವಾದ ಯೋಗಿಯಲ್ಲ; ಬಿಜೆಪಿ ಕಾಲೆಳೆದ ಅಖಿಲೇಶ್​ ಯಾದವ್​

ಲಖನೌ: 72 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್​ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಬ್ಬರ ನೋವು ಅರ್ಥವಾಗದ ಆದಿತ್ಯಾನಾಥ ನಿಜವಾದ ಯೋಗಿ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿಯ ಕೆಲಸವನ್ನು ನೋಡಿದಾಕ್ಷಣ ಅವರು ನಿಜವಾದ ಯೋಗಿಯೋ ಅಲ್ಲವೋ ಎನ್ನುವುದು ಗೊತ್ತಾಗುತ್ತದೆ. ನಮ್ಮ ರಾಜ್ಯದಲ್ಲಿ ಆಗಿರುವ ಕೆಲಸಗಳನ್ನು ನೋಡಿದರೆ ನಮ್ಮ ಮುಖ್ಯಮಂತ್ರಿ ಯೋಗಿ ಅಲ್ಲ ಎನ್ನುವುದು ತಿಳಿದುಬರುತ್ತದೆ. ಭಗವಾನ್​ ಕೃಷ್ಣ, ಗುರುನಾನಕ್​ ಮತ್ತು ಇತರರ ಬೋಧನೆಗಳನ್ನು ಕೇಳಿದ್ದರೆ ಅಥವಾ ಓದಿದ್ದರೆ ನಿಜವಾದ ಯೋಗಿಯ ವ್ಯಾಖ್ಯಾನ ತಿಳಿಯುತ್ತದೆ. ಯಾರು ಬೇರೊಬ್ಬರ ನೋವನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರೇ ನಿಜವಾದ ಯೋಗಿ. ಆದರೆ ನಮ್ಮ ಮುಖ್ಯಮಂತ್ರಿ ಆದಿತ್ಯಾನಾಥಗೆ ಯುವಜನರು, ರೈತರು ಹಾಗೂ ಸಾಮಾನ್ಯ ಜನರ ನೋವು ಅರ್ಥವೇ ಆಗುಲ್ಲ ಎಂದು ಅವರು ಆರೋಪಿಸಿದ್ದಾರೆ. ಇಟಾವಾ ಜಿಲ್ಲೆಯ ಸೈಫೈ ಪಟ್ಟಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ.

ಈಗಾಗಲೇ ಅಮೆರಿಕದಿಂದ ನಮಗೊಂದು ಪಾಠ ಸಿಕ್ಕಿದೆ. ಅಲ್ಲಿ ಸುಳ್ಳು ಹೇಳಿ ಬೇಳೆ ಬೇಯಿಸಿಕೊಳ್ಳುತ್ತಿದ್ದ ಪಕ್ಷವನ್ನು ಜನರು ಸೋಲಿಸಿದ್ದಾರೆ. ಮುಂದೆ ಭಾರತದಲ್ಲೂ ಹಾಗೆಯೇ ಆಗಲಿದೆ. ಕರೊನಾ ಬಂದಾಗಿನಿಂದ ಜನರು ಮುಖ, ಮೂಗು ಮುಚ್ಚಿಕೊಂಡಿದ್ದಾರೆ. ಆದರೆ ನಮ್ಮ ಬಿಜೆಪಿಯವರು ಕಣ್ಣು, ಕಿವಿಯನ್ನೂ ಮುಚ್ಚಿಕೊಂಡಿದ್ದಾರೆ. ಅವರಿಗೆ ಯಾವ ಕಾಯಿಲೆ ಬಂದಿದೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)