

ಮೀರತ್: ನಾಳೆಯೆಂದರೆ ಹಸೆ ಮಣೆ ಏರಬೇಕಿದ್ದ ಯುವತಿಯೊಬ್ಬಳು ಮದುವೆಯ ಹಿಂದಿನ ದಿನ ತನ್ನ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಮೀರತ್ನಲ್ಲಿ ನಡೆದಿದೆ. ತಂಗಿಯ ಅನೈತಿಕ ಸಂಬಂಧದಿಂದ ಬೇಸತ್ತ ಅಣ್ಣ ಅದೇ ಕಾರಣಕ್ಕೆ ಹೀಗೆ ಮಾಡಿದ್ದಾನೆ ಎನ್ನಲಾಗಿದೆ.
ಯುವತಿಯು ತನ್ನ ಸಹೋದರಿಯ ಬಾವನನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಈ ವಿಚಾರ ಇತ್ತೀಚೆಗೆ ಯುವತಿ ಮನೆಯಲ್ಲಿ ಗೊತ್ತಾಗಿದೆ. ಆಕೆಯ ಬಾವ ಕಾಸಿಮ್ಗೆ ಅವಳನ್ನು ಮದುವೆಯಾಗೆಂದು ಕೇಳಲಾಗಿದೆ. ಆದರೆ ಅದಕ್ಕೆ ಆತ ಒಪ್ಪಿಲ್ಲ. ಆ ಹಿನ್ನೆಲೆಯಲ್ಲಿ ಬೇರೊಬ್ಬ ಹುಡುಗನನ್ನು ಹುಡುಕಿ ಆತನೊಂದಿಗೆ ಮದುವೆ ನಿಶ್ಚಯಿಸಲಾಗಿದೆ.
ಜನವರಿ 24ರಂದು ಯುವತಿಯ ಮದುವೆ ಆಗುವುದರಲ್ಲಿತ್ತು. ಆದರೆ ನನ್ನಿಂದ ಯುವತಿ ದೂರಾಗುತ್ತಿದ್ದಾಳೆ ಎನ್ನುವ ಸಿಟ್ಟಿಗೆ ಬಿದ್ದ ಕಾಸಿಮ್ ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ವೈರಲ್ ಮಾಡಿದ್ದಾನೆ. ಈ ವಿಚಾರ ಯುವತಿಯ ಅಣ್ಣನಿಗೆ ತಿಳಿದುಬಂದಿದೆ. ಯುವತಿಯ ಮೇಲೆ ಮತ್ತೆ ಸಿಟ್ಟಾದ ಅಣ್ಣ ಮನೆಗೆ ಬಂದು ತಂಗಿಗೆ ಗುಂಡಿಕ್ಕಿ ಕೊಂದಿದ್ದಾನೆ. ಘಟನೆ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)