Air India: ಮಂಗಳವಾರ (ಜೂ.17) ಮುಂಜಾನೆ ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷ ಅನುಭವಿಸಿದ ಬೆನ್ನಲ್ಲೇ ಪ್ರಯಾಣಿಕರನ್ನು ಕೋಲ್ಕತ ಏರ್ಪೋರ್ಟ್ನಲ್ಲೇ ಇಳಿಸಲಾಗಿದೆ.
ಅಹಮದಾಬಾದ್ ವಿಮಾನ ದುರಂತ ಪ್ರಕರಣ ಬೆನ್ನಲ್ಲೇ ಹಲವು ವಿಮಾನಗಳ ಹಾರಾಟ ತಾಂತ್ರಿಕ ದೋಷಗಳಿಂದ ಸ್ಥಗಿತಗೊಳ್ಳುತ್ತಲೇ ಇವೆ. ಇದೊಂದು ರೀತಿ ವಿಮಾನ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಎರಡು ದಿನಗಳಲ್ಲಿ ಹಲವು ವಿಮಾನಗಳು ತಾಂತ್ರಿಕ ಸಮಸ್ಯೆಗಳಿಂದ ತುರ್ತು ಭೂಸ್ಪರ್ಶ ಮಾಡಿವೆ. ಈ ಸಾಲಿಗೆ ಮತ್ತೊಂದು ಏರ್ ಇಂಡಿಯಾ ಫ್ಲೈಟ್ ಸೇರಿದೆ.
ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯರಾತ್ರಿ 12:45ಕ್ಕೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ ದಿಢೀರ್ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನದ ಎಡಭಾಗದ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಕೂಡಲೇ ಸತತ 4 ಗಂಟೆಗಳ ಕಾಲ ವಿಮಾನ ಹಾರಾಟವನ್ನು ನಿರ್ಬಂಧಿಸಲಾಯಿತು.
ಇದನ್ನೂ ಓದಿ: ಇದೇ ಸಂಘರ್ಷಕ್ಕೆ ಕೊನೆ! ಅಮೆರಿಕ ಅಧ್ಯಕ್ಷ ಟ್ರಂಪ್ ಮಾತಿಗೆ ಸೆಡ್ಡು ಹೊಡೆದ ಇಸ್ರೇಲ್ ಪ್ರಧಾನಿ | End Conflict
ತಾಂತ್ರಿಕ ಸಮಸ್ಯೆ ಸರಿಹೋಗದ ಹಿನ್ನಲೆ ಬೆಳಗ್ಗೆ 5:20ಕ್ಕೆ, ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಯುವಂತೆ ಮನವಿ ಮಾಡಲಾಯಿತು. ವಿಮಾನ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಕ್ಯಾಪ್ಟನ್ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ,(ಏಜೆನ್ಸೀಸ್).