ನ್ಯೂಸ್

ಅಫ್ಘಾನಿಸ್ತಾನದಲ್ಲಿ ಭೂಕಂಪ; ವಿಶ್ವಕಪ್​ನಲ್ಲಿ ಪಡೆದ ಶುಲ್ಕವೆಲ್ಲ ಸಂತ್ರಸ್ತರ ನೆರವಿಗೆ ಎಂದ ರಷೀದ್​ ಖಾನ್​

ಇಸ್ಲಾಮಾಬಾದ್​: ಅಫ್ಘಾನಿಸ್ತಾನದಲ್ಲಿ ಕಳೆದ ಶನಿವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಮಡಿದವರ ಸಂಖ್ಯೆ 2,000 ದಾಟಿದೆ ಎಂದು ತಾಲಿಬಾನ್​ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ. ಇದು ಎರಡು ದಶಕಗಳಲ್ಲಿ ದೇಶವನ್ನು ಕಾಡಿದ ಮಾರಕ ಭೂಕಂಪಗಳಲ್ಲಿ ಒಂದಾಗಿದೆ. ಶನಿವಾರದ ಭೂಕಂಪದ ತೀವ್ರತೆ ರಿಕ್ಟರ್​ ಮಾಪಕದಲ್ಲಿ 6.3 ಆಗಿತ್ತು. ನಂತರ ಹಲವು ಪಶ್ಚಾತ್​ ಕಂಪನಗಳು ಸಂಭವಿಸಿದವು ಎಂದು ಆ್ಘನ್​ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.

ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಈಗಾಗಲೇ ಹೇಳಿದೆ. ಹೆರಾತ್​ ನಗರದ ವಾಯವ್ಯದಲ್ಲಿ ಸುಮಾರು 40 ಕಿಮೀ ದೂರದಲ್ಲಿ ಭೂಕಂಪದ ಬಿಂದು ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ.

ಕ್ರಿಕೆಟಿಗ ರಷೀದ್​ ಖಾನ್​ ನೆರವು

ತಮ್ಮ ದೇಶದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪಕ್ಕೆ ಮರುಗಿರುವ ಆ್ಘಾನಿಸ್ತಾನದ ಖ್ಯಾತ ಕ್ರಿಕೆಟಿಗ ರಷೀದ್​ ಖಾನ್​, ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​ನಿಂದ ತಾವು ಪಡೆಯುವ ಶುಲ್ಕದ ಎಲ್ಲ ಹಣವನ್ನು ಹೆರಾತ್​ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ. ಹೆರಾತ್​ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಆ್ಘಾನಿಸ್ತಾನದ ಜಪಾನ್​ ರಾಯಭಾರಿ ತಕಾಷಿ ಒಕಾಡಾ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಮನಕಲುಕಿದ ದೃಶ್ಯ

ಕುಸಿದ ಕಟ್ಟಡದಡಿ ಕತ್ತಿನವರೆಗೆ ಹೂತುಹೋಗಿದ್ದ ಹೆಣ್ಣು ಮಗುವೊಂದನ್ನು ಹೊರತೆಗೆಯುತ್ತಿರುವ ಮನಕಲಕುವ ವಿಡಿಯೋ ದೃಶ್ಯ ಆನ್​ಲೈನ್​ನಲ್ಲಿ ಪ್ರಸಾರವಾಗಿದೆ. ತೊಟ್ಟಿಲಿನಿಂದ ಒಂದು ಕೈ ಹೊರಗಡೆ ಕಾಣಿಸುತ್ತಿದ್ದು ಅದು ಮಗುವಿನ ತಾಯಿಯದ್ದು ಇರಬಹುದು ಎಂದು ಪರಿಹಾರ ಕಾರ್ಯದಲ್ಲಿ ನಿರತರಾದ ಸ್ವಯಂ ಸೇವಕರು ತಿಳಿಸಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಮಡಿದವರ ಸಂಖ್ಯೆ ಆರಂಭದಲ್ಲಿ ವರದಿಯಾಗಿದ್ದಕ್ಕಿಂತ ತುಂಬಾ ಹೆಚ್ಚಾಗಿದೆ ಎಂದು ವಾರ್ತೆ ಮತ್ತು ಸಂಸತಿ ಸಚಿವಾಲಯದ ವಕ್ತಾರ ಅಬ್ದುಲ್​ ವಾಹಿದ್​ ರಯಾನ್​ ಹೇಳಿದ್ದಾರೆ.

ಭೂಕಂಪದಿಂದ ಕುಸಿದ ಬಂಡೆಗಳು ಹಾಗೂ ಅವಶೇಷಗಳಡಿಯಿಂದ ಜನರು ಶವಗಳು ಹಾಗೂ ಗಾಯಾಳುಗಳನ್ನು ಖಾಲಿ ಕೈಗಳಿಂದ ಹೊರತೆಗೆಯುತ್ತಿದ್ದಾರೆ. ಭೂಕಂಪದಲ್ಲಿ ಬದುಕುಳಿದವರು ಕಟ್ಟಡಗಳಡಿ ಸಿಲುಕಿಕೊಂಡಿದ್ದು ಅವರ ಮುಖಗಳು ಧೂಳಿನಿಂದ ಕಂದು ಬಣ್ಣಕ್ಕೆ ತಿರುಗಿವೆ.

ಹಳ್ಳಿಗಳು ನಾಶ

ಭೂಕಂಪದಿಂದ ಅನೇಕ ಗ್ರಾಮಗಳು ನಾಶವಾಗಿವೆ. ನೂರಾರು ಜನರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಿರುವ ರಯಾನ್​, ತುರ್ತು ನೆರವಿಗಾಗಿ ಜಾಗತಿಕ ಸಮುದಾಯಕ್ಕೆ ಮೊರೆಯಿಟ್ಟಿದ್ದಾರೆ. 2,060 ಜನರು ಮೃತಪಟ್ಟು 1,240 ಮಂದಿ ಗಾಯಗೊಂಡಿದ್ದಾರೆ. 1,320 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ರಯಾನ್​ ವಿವರಿಸಿದ್ದಾರೆ. ಮೊದಲ ಭೂಕಂಪ ಸಂಭವಿಸಿದಾಗ ತಾನು ಕಚೇರಿಯಲ್ಲಿದ್ದೆ ಎಂದು ಹೇಳಿರುವ ನೆಕ್​ ಮಹಮದ್​ ಎಂಬ ನಾಗರಿಕನೊಬ್ಬ, ಮುಂದಿನ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಕುಸಿದು ಬಿದ್ದು ಮಣ್ಣಿನ ಗುಡ್ಡೆಯಾಯಿತು ಎಂದಿದ್ದಾರೆ.

ರಕ್ಷಣಾ ಕಾರ್ಯಾಚರಣೆ

ಮಿಲಿಟರಿ ಮತ್ತು ರೆಡ್​ ಕ್ರೆಸೆಂಟ್​ ಸಹಿತ ಲಾಭೇತರ ಸಂಸ್ಥೆಗಳ ಕನಿಷ್ಠ ಒಂದು ಡಜನ್​ ತಂಡಗಳು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ. ವಿಶ್ವ ಸಂಸ್ಥೆಯ ವಲಸೆ ಸಂಬಂಧಿತ ಸಂಸ್ಥೆಯು ವೈದ್ಯರನ್ನೊಳಗೊಂಡ ನಾಲ್ಕು ಆಂಬುಲೆನ್ಸ್​ ನಿಯೋಜಿಸಿದೆ ಹಾಗೂ ಪ್ರಾದೇಶಿಕ ಆಸ್ಪತ್ರೆಗೆ ಮನೋ ತಜ್ಞರನ್ನು ಕಳಿಸಿದೆ. ಅತಿ ಹೆಚ್ಚು ಸಂತ್ರಸ್ತ ಪ್ರದೇಶಗಳಲ್ಲಿ ಒಂದಾದ ಝೆಂಡಾ ಜನ್​ ಜಿಲ್ಲೆಗೆ ಕನಿಷ್ಠ ಮೂರು ಸಂಚಾರಿ ಆರೋಗ್ಯ ತಂಡಗಳು ತೆರಳುತ್ತಿವೆ. ಹೆರಾತ್​ ಪ್ರಾದೇಶಿಕ ಆಸ್ಪತ್ರೆಯಲ್ಲಿ ಡಾಕ್ಟರ್ಸ್​ ವಿದೌಟ್​ ಬಾರ್ಡರ್ಸ್​ ಸಂಸ್ಥೆ ಐದು ವೈದ್ಯಕಿಯ ಶಿಬಿರಗಳನ್ನು ತೆರೆದಿದೆ.

ಪಾಕ್​ ಸಹಾಯಹಸ್ತ

ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣವಾದ ಆ್ಘನ್​ ಭೂಕಂಪಕ್ಕೆ ನೆರೆಯ ಪಾಕಿಸ್ತಾನ ತೀವ್ರ ಶೋಕ ವ್ಯಕ್ತಪಡಿಸಿದೆ. ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾದ ಎಲ್ಲ ನೆರವನ್ನು ನೀಡಲಾಗುವುದೆಂದು ವಿದೇಶಾಂಗ ಸಚಿವಾಲಯ ಹೇಳಿದೆ.