ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3ರ ಯಶಸ್ಸಿನ ಬೆನ್ನಿಗೇ ಸೂರ್ಯಯಾನ ಆದಿತ್ಯ ಎಲ್-1ಗೂ ಸಜ್ಜಾಗಿರುವ ವಿಷಯ ಇನ್ನೊಮ್ಮೆ ಮುನ್ನೆಲೆಗೆ ಬಂದಿತ್ತು. ಇದೀಗ ಸೂರ್ಯಯಾನದ ದಿನಾಂಕ ಕೂಡ ನಿಗದಿಯಾಗಿದೆ.
ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೂರ್ಯನ ಅಧ್ಯಯನಕ್ಕೆ ಹಮ್ಮಿಕೊಳ್ಳಲಾಗಿರುವ ಆದಿತ್ಯ ಎಲ್-1, ಪಿಎಸ್ಎಲ್ವಿ-ಸಿ57 ಉಡಾವಣೆ ಕುರಿತ ದಿನಾಂಕವನ್ನು ಇಸ್ರೋ ನಿಗದಿ ಮಾಡಿ ಪ್ರಕಟಿಸಿದೆ. ಇದೇ ಸೆ. 2ರಂದು ಸೂರ್ಯಯಾನದ ಆದಿತ್ಯ ಎಲ್-1 ಉಡಾವಣೆ ಆಗಲಿರುವುದಾಗಿ ಇಸ್ರೋ ತಿಳಿಸಿದೆ.
ಚಂದ್ರಯಾನ-3ರಂತೆ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಕೂಡ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಇದೇ ಸೆ. 2ರ ಬೆಳಗ್ಗೆ 11.50ಕ್ಕೆ ಉಡಾವಣೆ ಆಗಲಿದೆ. ಆಸಕ್ತರು ಶ್ರೀಹರಿಕೋಟಾದ ಲಾಂಚ್ ಗ್ಯಾಲರಿಯಲ್ಲಿ ಕುಳಿತು ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂದೂ ಇಸ್ರೋ ಆ ಕುರಿತ ಮಾಹಿತಿ ನೀಡಿದೆ.