ನ್ಯೂಸ್

‘ಟಾಕ್ಸಿಕ್’ ಪಯಣ ಶುರು; ಬೆಳ್ಳಂಬೆಳಿಗ್ಗೆಯೇ ಬಿಗ್​ ಅಪ್​ಡೇಟ್ ನೀಡಿದ ಯಶ್

ಬೆಂಗಳೂರು: ಈ ಹಿಂದೆ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್​ ಸರಣಿ ಬಳಿಕ ನಟ ಯಶ್​ ಮಲಯಾಳಂ ನಿರ್ದೇಶಕಿ  ಗೀತು ಮೋಹನ್​ ದಾಸ್​ ನಿರ್ದೇಶನ ಟಾಕ್ಸಿಕ್​​ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಇಂದು (ಆಗಸ್ಟ್​ 08) ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರು ನಗರದ HMT ಫ್ಯಾಕ್ಟರಿಯಲ್ಲಿ ಹಾಕಲಾಗಿರುವ ಬೃಹತ್​ ಸೆಟ್​ನಲ್ಲಿ ಚಿತ್ರತಂಡ ಬ್ರಾಹ್ಮೀ ಮುಹೂರ್ತದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದು, ಇಂದಿನಿಂದಲೇ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದೆ.

ಟಾಕ್ಸಿಕ್​ ಸಿನಿಮಾದ ಕುರಿತು ನಟ ರಾಕಿಂಗ್ ಸ್ಟಾರ್​ ಯಶ್​ ಮಾಹಿತಿ ಹಂಚಿಕೊಂಡಿದ್ದು, ಬೆಳ್ಳಂಬೆಳಿಗ್ಗೆಯೇ ಸಿನಿ ರಸಿಕರಿಗೆ ಬಿಗ್​ ಅಪ್ಡೇಟ್​ ನೀಡಿದ್ದಾರೆ. ಪಯಣ ಶುರುವಾಗಿದೆ (The journey begins #Toxic) ಎಂದು ಬರೆದುಕೊಳ್ಳುವ ಮೂಲಕ ಸಿನಿಮಾದ ಶೂಟಿಂಗ್​ ಇಂದಿನಿಂದಲೇ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್​ ಆಗಿದ್ದು, ಮುಂದಿನ ಅಪ್ಡೇಟ್​ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಟಾಕ್ಸಿಕ್​ ಚಿತ್ರದ ಕೆಲಸಗಳು ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನ ನಟ ಯಶ್​ ಕುಟುಂಬ ಸಮೇತರಾಗಿ ಧರ್ಮಸ್ಥಳ, ಸುರ್ಯದಲ್ಲಿರುವ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಟಾಕ್ಸಿಕ್​ ಸಿನಿಮಾದ ಶೂಟಿಂಗ್​ ಆರಂಭಗೊಂಡಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ HMT ಫ್ಯಾಕ್ಟರಿಯಲ್ಲಿ ಇದಕ್ಕಾಗಿ ಬೃಹತ್​ ಸೆಟ್​ ಹಾಕಲಾಗಿದೆ.

ಆಗಸ್ಟ್ 8ರಂದು ಶೂಟಿಂಗ್ ಆರಂಭಿಸುವುದಕ್ಕೂ ಒಂದು ಕರಣ ಇದೆ. ಎಂಟನ್ನು ಯಶ್ ಅವರು ಲಕ್ಕಿ ಎಂದು ಪರಿಗಣಿಸುತ್ತಾರೆ. ಅವರ ಹುಟ್ಟಿದ್ದು ಕೂಡ ಎಂಟಕ್ಕೆ (ಜನವರಿ 8). ಇಂದಿನ ದಿನಾಂಕದಲ್ಲಿ ಎಲ್ಲವೂ ಎಂಟೇ ಇದೆ. 8-8-2024 (2+0+2+4=8). ಈ ಕಾರಣಕ್ಕೆ ಆಗಸ್ಟ್ 8ರಿಂದ ಶೂಟಿಂಗ್ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್​ ದಾಸ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಕೆವಿಎನ್​ ಪ್ರೊಡಕ್ಷನ್ಸ್​ ಬಂಡವಾಳ ಹೂಡುತ್ತಿದೆ. ಸಿನಿಮಾದ ಪಾತ್ರವರ್ಗ ಹಾಗೂ ಟೆಕ್ನಿಕಲ್​ ಟೀಮ್​ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ದೊಡ್ಡ ಬಜೆಟ್​ನಲ್ಲಿ ಮೂಡಿ ಬರುತ್ತಿದೆ.