ನ್ಯೂಸ್

ವರದಕ್ಷಿಣೆಗಾಗಿ ಮಹಿಳೆಯ ಬಾಯಿಗೇ ಆ್ಯಸಿಡ್​ ಸುರಿದರು! 'ಅಪ್ಪಾ..' ಎಂದು ಅಳುತ್ತಾ ಕರೆ ಮಾಡಿದ ಮಗಳು..

ಲಖನೌ: ವರದಕ್ಷಿಣೆ ಕಾನೂನಿನ ಪ್ರಕಾರ ಅಪರಾಧವೆನ್ನುವುದು ಗೊತ್ತಿದ್ದರೂ ನಮ್ಮಲ್ಲಿ ಆಗೊಂದು ಈಗೊಂದು ವರದಕ್ಷಿಣೆ ಕಿರುಕುಳ ಪ್ರಕರಣಗಳು ಕೇಳಿ ಬರುತ್ತಲೇ ಇರುತ್ತವೆ. ಅದೇ ರೀತಿ ವರದಕ್ಷಿಣೆಗಾಗಿ ಗಂಡನ ಮನೆಯವರು ಮನೆ ಸೊಸೆಯ ಬಾಯಿಗೇ ಆ್ಯಸಿಡ್​ ಹೊಯ್ದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಶರ್ಮಾ ಅವರು ಮಗಳು ಯಶೋಧಾಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಇನ್ನೂ 21ರ ಪ್ರಾಯದಲ್ಲಿದ್ದ ಯಶೋಧಾಳಿಗೆ ಆಕೆಯ ಗಂಡನ ಮನೆಯವರು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಆಗಾಗಾ ಪೀಡಿಸುತ್ತಿದ್ದರಂತೆ. ಅದರಂತೆ ಇತ್ತೀಚೆಗೆ ಒಂದು ದಿನ ಗಂಡ ಸೇರಿ ಆತನ ಮನೆಯವರೆಲ್ಲರೂ ಸೇರಿಕೊಂಡು ಯಶೋಧಾಳಿಗೆ ಹಿಂಸಿಸಲು ಆರಂಭಿಸಿದ್ದಾರೆ.

ಈ ವಿಚಾರವಾಗಿ ಯಶೋಧಾ ತನ್ನ ಅಪ್ಪನಿಗೆ ಕರೆ ಮಾಡಿ ನೋವನ್ನು ತೋಡಿಕೊಂಡಿದ್ದಾಳೆ. ಅಪ್ಪಾ.. ಇವರು ನನಗೆ ವರದಕ್ಷಿಣೆ ತರದಿದ್ದರೆ ವಿಷ ಕುಡಿ ಎಂದು ಪೀಡಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ. ಈ ವಿಚಾರ ತಿಳಿದ ತಕ್ಷಣ ತಂದೆ ಶರ್ಮಾ ತನ್ನ ಮಗನೊಂದಿಗೆ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಅದಾದ ನಂತರ ಮಗಳನ್ನು ನೋಡಲು ಆಕೆಯ ಮನೆಗೆ ಬಂದಿದ್ದಾನೆ.

ಆದರೆ ಮನೆಗೆ ಬಂದ ತಂದೆಗೆ ಅಘಾತ ಎದುರಾಗಿತ್ತು. ಪ್ರೀತಿಯಿಂದ ಸಾಕಿದ್ದ ಮಗಳು ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮನೆ ಮಂದಿಯೆಲ್ಲ ಸೊಸೆಗೆ ಥಳಿಸಿ ಅಲ್ಲಿಂದ ಪರಾರಿಯಾಗಿದ್ದರು. ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಜಿಲ್ಲಾಸ್ಪತ್ರೆಗೆ ಹೋಗುವುದರೊಳಗೆ ಆಕೆ ಪ್ರಾಣ ಬಿಟ್ಟಿದ್ದಾಳೆ. ಮೃತಳ ಬಾಯಿಗೆ ಆ್ಯಸಿಡ್​ ಹಾಕಿದ್ದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)